ಅಧಿಕಾರಿಗಳ ಮೈ ಚಳಿ ಬಿಡಿಸಿದ ಶಾಸಕ

22arsph1ep,,,,
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್, ಇಒ ಸತೀಶ್ ಕುಮಾರ್ ಇದ್ದಾರೆ.
Published on

ಮೂಲಸೌಕರ್ಯ ಒದಗಿಸದ ಇಲಾಖೆಗಳ ವಿರುದ್ಧ ಎಚ್.ಕೆ.ಸುರೇಶ್ ಕಿಡಿ

ಅರಸೀಕೆರೆ : ಸರ್ಕಾರದ ಸವಲತ್ತುಗಳನ್ನು ತಲುಪಿಸುವಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಕಡೆಗಣಿಸಿದರೆ ಸಹಿಸುವುದಿಲ್ಲ ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫಲಾನುಭವಿಗಳ ಆಯ್ಕೆ, ಸವಲತ್ತುಗಳ ವಿತರಣೆಯಲ್ಲಿ ತಾಲೂಕಿನ ಕೆಲ ಅಧಿಕಾರಿಗಳು ನನಗೆ ಮಾಹಿತಿ ನೀಡುತ್ತಿಲ್ಲ. ಜಾವಗಲ್ ಹೋಬಳಿ ಅನ್ಯಕ್ಷೇತ್ರಕ್ಕೆ ಸೇರಿದ್ದು ನಾವೇಕೆ ತಿಳಿಸಬೇಕು ಎನ್ನುವ ಮನೋಭಾವ ಕೆಲ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಇದಕ್ಕೆ ನಿದರ್ಶನವೆಂಬಂತೆ ರೇಷ್ಮೆ ಇಲಾಖೆಯ ಅಧಿಕಾರಿ ರೇಷ್ಮೆಹುಳು ಸಾಕಣೆ ಮನೆಗಳನ್ನು ನೀಡುವಾಗ ಗಮನಕ್ಕೆ ತಂದಿಲ್ಲ. ಪಶುಸಂಗೋಪನೆ, ಕಾರ್ಮಿಕ ಇಲಾಖೆ ಕೂಡ ಇದಕ್ಕೆ ಹೊರತಾಗಿಲ್ಲ. ದಲ್ಲಾಳಿಗಳನ್ನು ಮುಂದಿಟ್ಟು ನಡೆಸುತ್ತಿರುವ ವ್ಯವಹಾರ ಕೂಡಲೇ ನಿಲ್ಲಿಸದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡುತ್ತೇನೆ ಎಂದು ಖಡಕ್ ವಾರ್ನಿಂಗ್ ನೀಡಿದರು.

ಹಾರನಹಳ್ಳಿ, ಜಾವಗಲ್ ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಗಿಡ-ಗಂಟಿಗಳು ಬೆಳೆದುಕೊಂಡಿದ್ದು, ಕಾಡು ಪ್ರಾಣಿಗಳ ಆವಾಸ ತಾಣವಾಗಿದೆ. ರಾತ್ರಿವೇಳೆ ವಾಹನ ಸವಾರರ ಮೇಲೆ ದಾಳಿ ಮಾಡುವ ಅಪಾಯವಿದೆ. ಸಾಲದೆಂಬಂತೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ಬೈಕ್, ಕಾರು ಸೇರಿದಂತೆ ವಾಹನಗಳ ಚಾಲಕರು ಪರದಾಡುವ ಸನ್ನಿವೇಶ ನಿರ್ಮಾಣಗೊಂಡಿದೆ. ಜನರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ವಿರುದ್ಧ ಸುರೇಶ್ ಹರಿಹಾಯ್ದರು.

ಹೊಲಗಳಿಗೆ ನೀರು ಹಾಯಿಸಲು ಪೈಪ್‌ಲೈನ್ ತೆಗೆಯವ ರೈತರಿಗೆ ರಸ್ತೆ ಅಗೆಯದಂತೆ ಸೂಚನೆ ನೀಡಲಾಗಿದ್ದರೂ ಅಲ್ಲಲ್ಲಿ ಗುಂಡಿ ತೆಗೆಯುತ್ತಿದ್ದಾರೆ. ಇಲಾಖೆ ವತಿಯಿಂದ ಕ್ರಮ ಜರುಗಿಸಲು ತೀರ್ಮಾನಿಸಲಾಗಿದ್ದು, ರಸ್ತೆಯ ದುರಸ್ತಿ ಜತೆಗೆ ಇಕ್ಕೆಲಗಳ ಜಂಗಲ್ ತೆರವುಗೊಳಿಸುವುದಾಗಿ ಲೋಕೋಪಯೋಗಿ ಎಇಇ ಮುನಿರಾಜು ಶಾಸಕರಿಗೆ ಭರವಸೆ ನೀಡಿದರು.

ಆಕ್ರೋಶ:

ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎನ್ನುವ ದೂರುಗಳು ನಾಗರಿಕರಿಂದ ಕೇಳಿ ಬಂದಿವೆ. ಅಧಿಕಾರಿಗಳು ಸಸಿ ನೆಡುವುದು, ಫೋಟೋ ತೆಗಿಸಿ ಹಣ ನುಂಗುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿ ಗೈರಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಗೈರಿನ ಕುರಿತು ನಡಾವಳಿಯಲ್ಲಿ ವಿವರ ದಾಖಲಿಸುವಂತೆ ಸೂಚಿಸಿದರು.

ಜಾವಗಲ್ ಹೋಬಳಿಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ಕೆಲ ಪಡಿತರ ವಿತರಕರು ಅಕ್ಕಿ ನೀಡಲು ಹತ್ತು ರೂ. ಹಣ ಇಲ್ಲವೇ ಒಂದು ಕೆ.ಜಿ. ಅಕ್ಕಿ ಕೊಡುವಂತೆ ಪೀಡಿಸುತ್ತಿರುವ ದೂರುಗಳಿವೆ. ಸರದಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಲೋಪ ಕಂಡುಬಂದಲ್ಲಿ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಆಹಾರ ಶಿರಸ್ತೇದಾರ್ ಬಾಲಚಂದ್ರು ಅವರಿಗೆ ಸೂಚಿಸಿದರು.

ತರಾಟೆ:

ಪ್ರಗತಿ ಪರಿಶೀಲನಾ ಸಭೆ ನಡೆಯುವ ವೇಳೆ ಉಂಡಿಗನಾಳು ಗ್ರಾಪಂ ಪಿಡಿಒ ಮೊಬೈಲ್ ನೋಡುತ್ತಿದ್ದರು. ಇದನ್ನು ಗಮನಿಸಿದ ಶಾಸಕ ಎಚ್.ಕೆ.ಸುರೇಶ್, ಸಭೆ ಕರೆದಿರುವ ಔಚಿತ್ಯವೇನು, ನೀವೇನು ಮಾಡುತ್ತಿದ್ದೀರಿ, ಮೊಬೈಲ್ ನೋಡಲು ಇಲ್ಲಿಗೆ ಬರಬೇಕೇ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಭೂಸೇನಾ ನಿಗಮದ ಇಂಜಿನಿಯರ್ ದೀಕ್ಷಿತ್ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದರು. ಕೃಷಿ, ತೋಟಗಾರಿಕೆ, ಸಣ್ಣನಿರಾವರಿ, ಆರೋಗ್ಯ, ಕಂದಾಯ, ಶಿಕ್ಷಣ, ಸಮಾಜ ಕಲ್ಯಾಣ, ಎತ್ತಿನಹೊಳೆ, ಹಿಂದುಳಿದ ವರ್ಗ, ತೋಟಗಾರಿಕೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಒಳಗೊಂಡಂತೆ 30ಕ್ಕೂ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸಲಹೆ, ಸೂಚನೆ ನೀಡಿದರು.

ಬೇಲೂರು ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ವೈ.ಎನ್.ರುದ್ರೇಶಗೌಡ, ಕೆ.ಎಸ್.ಲಿಂಗೇಶ್ ಶಾಸಕರಾಗಿ ಜಾವಗಲ್ ಹೋಬಳಿ ಪ್ರತಿನಿಧಿಸಿದ್ದರೂ ಪ್ರತ್ಯೇಕ ಸಭೆ ಮಾಡಿದ್ದು ವಿರಳ. ಬದಲಾಗಿ ಅರಸೀಕೆರೆ, ಬೇಲೂರು ಶಾಸಕರಿಬ್ಬರೂ ಒಟ್ಟಾಗಿ ಕೆಡಿಪಿ ಸಭೆ ನಡೆಸಿದ್ದರು. ಆದರೆ ಇದಕ್ಕೆ ವಿಭಿನ್ನ ಎನ್ನುವಂತೆ ಎಚ್.ಕೆ.ಸುರೇಶ್ ಜಾವಗಲ್ ಹೋಬಳಿ ಪ್ರಗತಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ. ತಾಲೂಕಿಗೆ ಬರುವ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ನನ್ನನ್ನು ಕಡೆಗಣಿಸಿದರೆ ಸಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿ ವರ್ಗಕ್ಕೂ ಚುರುಕು ಮುಟ್ಟಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net