

ಮಂಡ್ಯ: ಜಿಲ್ಲೆಯ ಇತಿಹಾಸ ಗಂಗರು, ರಾಷ್ಟ್ರಕೂಟರು, ಚೋಳರು, ಹೊಯ್ಸಳ ಅರಸರ ಆಳ್ವಿಕೆಯನ್ನು ಒಳಗೊಂಡಿದೆ. ಮಂಡ್ಯದ ಇತಿಹಾಸ ಹಾಗೂ ಅಭಿಜಾತ ಸಾಹಿತ್ಯವು ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ಪುನರುತ್ಥಾನವಾಯಿತು ಎಂದು ಹಿರಿಯ ವಿದ್ವಾಂಸ ಟಿ.ವಿ.ವೆಂಕಟಾಚಲಶಾಸ್ತ್ರಿ ಬಣ್ಣಿಸಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಮಂಡ್ಯ’ ಮಾಹಿತಿ ಮಹಾಮನೆಯಾಗಲಿ ಅಥವಾ ದಾಖಲಾತಿ ಭಂಡಾರ ಆಗಬೇಕಿದೆ. ಇದಕ್ಕೆ ಚುಂಚಶ್ರೀ, ಪ್ರೊ.ಬಿ.ಜಯಪ್ರಕಾಶಗೌಡ ಸೇರಿದಂತೆ ಅಪಾರ ಕನ್ನಡ ಬಂಧುಗಳು ಶ್ರಮಿಸಿ ವಿಷಯಗಳನ್ನು ಸಂಗ್ರಹಿಸುವ ಕೆಲಸವಾಗಬೇಕು ಎಂದರು.
ಆದಿಚುಂಚನಗಿರಿ ಮಠ ಸಂಸ್ಥಾನದ ಬಳಿ ಇರುವ ಬೆಳ್ಳೂರು, ನಾಗಮಂಗಲ, ಮಂಡ್ಯ ಕೀಲಾರ ಸೇರಿದಂತೆ ಹಲವು ಗ್ರಾಮಗಳನ್ನು ನೋಡಿದರೆ ಮಹಾನಾಯಕರು ಇರುವುದು ಕಂಡು ಬರುತ್ತದೆ. ಮುಖ್ಯವಾಗಿ ಬಿ.ಎಂ.ಶ್ರೀಕಂಠಯ್ಯ ಅವರು ಆಧುನಿಕ ಕಣ್ವ ಎಂದೇ ಖ್ಯಾತಿ ಆಗಿರುವುದನ್ನು ನೋಡಬಹುದು. ಇವರು ಅಚ್ಚ ಕನ್ನಡ ಹಾಗೂ ಸಂಸ್ಕೃತ ತಿಳಿಸಿರುವುದನ್ನು ನಾವು ಕಾಣುತ್ತೇವೆ. ಜತೆಗೆ ಬಿಎಂಶ್ರೀ ಅವರು ಆಧುನಿಕ ಕವಿಗಳು ಹೌದು ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಯಾವುದೇ ವ್ಯಕ್ತಿ ದೇಹಕ್ಕಿಂತ ಮನಸ್ಸಿಗೆ ಸ್ನಾನ ಮಾಡುವುದು ಮುಖ್ಯವಾಗಬೇಕು. ಏಕೆಂದರೆ ಆ ವ್ಯಕ್ತಿಯ ಜತೆ ಸಂವಾದ ಸರಿ ಇರುತ್ತದೆ. ಇಲ್ಲವಾದರೆ ಗೊಂದಲಮಯವಾಗಿರುತ್ತದೆ. ಸಮಾಜದಲ್ಲಿ ಸ್ನಾನ ಎಂದರೆ ಏನೆಂಬುದನ್ನು ಪ್ರಶ್ನಿಸುವ ಮನಸ್ಸುಗಳು ಇವೆ ಎಂದರು.
ಕೊಮ್ಮೇರಹಳ್ಳಿ ಶಾಖಾಮಠದ ಮುಖ್ಯಸ್ಥ ಪುರುಷೋತ್ತಮಾನಂದನಾಥ ಸ್ವಾಮೀಜಿ, ಸಾಹಿತಿ ಡಾ.ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ, ಮೈಸೂರಿನ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್, ಹ.ಕ.ರಾಜೇಗೌಡರವರ ಸುಪುತ್ರ ಎಚ್.ಆರ್. ದಿನೇಶ್‌ಚಂದ್ರ, ನಾಗಪ್ಪ, ಕೋಣನಹಳ್ಳಿ ಜಯರಾಂ, ಚಂದಗಾಲು ಲೋಕೇಶ್ ಇದ್ದರು.