ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ರೈಲ್ವೆ ಸಂಪರ್ಕ!

IMG-20231214-WA0011.jpg
Published on


-ಶೀಘ್ರದಲ್ಲಿ ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ
-ಪರಿಷತ್ತಿನಲ್ಲಿ ಸಚಿವ ಎಚ್. ಕೆ. ಪಾಟೀಲ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಸಮಾನತೆಯ ಧಾರ್ಮಿಕ ಕ್ಷೇತ್ರವಾಗಿರುವ, ದೇಶಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಸವದತ್ತಿ ಯಲ್ಲಮ್ಮ ಧಾರ್ಮಿಕ ಕ್ಷೇತ್ರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಲು  ಶೀಘ್ರದಲ್ಲಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ತಿಳಿಸಿದರು.
ವಿಧಾನ ಪರಿಷತ್ ನಲ್ಲಿ ಗುರುವಾರ ಮಂಡಿಸಲಾದ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ‌ ಮೇಲೆ ಚರ್ಚೆಯ ವೇಳೆ ಸಚಿವರು ಮಾತನಾಡಿ, ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ರೈಲ್ವೆ ಸಂಪರ್ಕಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಅಲ್ಲದೆ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಗೆ ಭೂಮಿ ಕೊರತೆ ಇಲ್ಲ. 1000 ಎಕರೆ ಭೂಮಿ ಲಭ್ಯವಿದ್ದು, ಅದೇ ಸ್ಥಳದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳು, ಉದ್ಯಮಿಗಳು ಸೇರಿದಂತೆ ಇತರರು ಅಭಿವೃದ್ಧಿ ಕೈಲಾದಷ್ಟು ಸಹಾಯದ‌ಮೂಲಕ ಅಭಿವೃದ್ಧಿ ಗೆ ಕೈ ಜೋಡಿಸಬೇಕು ಎಂದರು.
3ಸಾವಿರ ಕೋಟಿ ರೂ. ಆದಾಯ
ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಧಾರ್ಮಿಕ ಕ್ಷೇತ್ರಗಳಿಂದ ವಾರ್ಷಿಕ 300 ಕೋಟಿ ರೂ. ಬರುತ್ತದೆ. ಆದರೆ, ಬೀಗಿ ಆಡಳಿತ, ಆದಾಯ ಸೋರಿಕೆ ತಡೆಗಟ್ಟಿದ್ದರೆ ವಾರ್ಷಿಕ 3000 ಕೋಟಿ ರೂ.‌ಆದಾಯ ಬರುತ್ತದೆ. ಸರ್ಕಾರವು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಅಲ್ಲದೆ, ಕೆಎಎಸ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಬಿ.ಕೆ.ಹರಿಪ್ರಸಾದ್, ಉಮಾಶ್ರೀ ಮಾತನಾಡಿ, ಸವದತ್ತಿ ಯಲ್ಲಮ್ಮ ಕ್ಷೇತ್ರದಲದಲಿ ದೇವದಾಸಿ ಪದ್ಧತಿ ಜೀವಂತವಾಗಿದ್ದು, ಅವರೆಲ್ಲಾ ಕಠಿಣ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಮೂಢನಂಬಿಕೆ ತೆಗೆದು ಹಾಕಿ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ವಿನಂತಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವ ಎಚ್. ಕೆ. ಪಾಟೀಲ ಅವರು, ಮುಂದಿನ ಮೂರು ವರ್ಷದಲ್ಲಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಚಿತ್ರವೇ ಬದಲಾಗಲಿದೆ. ಅನ್ನದಾಸೋಹ, ಜಾನುವಾರಗಳಿಗೆ ಮೇವು ದಾಸೋಹ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೇಣುಕಾ ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ವಿಧೇಯಕ‌ ಅಂಗೀಕಾರ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net