ರಘುನಾಥ​ ಚ.ಹ.ಗೆ ಪ್ರೊ.ಎಚ್​.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿ

Sannaguddaiah_Pratistana
Published on

ತುಮಕೂರು : ನಮ್ಮ ನಾಡಿನ ಸಾಂಸತಿಕ ಚರಿತ್ರೆಯನ್ನು ಗಮನಿಸುತ್ತಾ ಬಂದವರಿಗೆ ಸಮಾಜವಾದಿ ಚಿಂತನೆ ಮತ್ತು ಎಡಪಂಥೀಯ ಚಿಂತನೆಗಳ ನಡುವೆ ಸಹಕಾರಕ್ಕಿಂತ ಸಂರ್ಷವಿತ್ತೆಂಬುದು ಸ್ಪಷ್ಟವಾಗಿ ಕಂಡುಬಂದಿದೆ ಎಂದು ವಿಮರ್ಶಕ ಎಚ್​.ಎಸ್​. ರಾಘವೇಂದ್ರರಾವ್​ ಹೇಳಿದರು.

ನಗರದ ವಿವಿಯ ಸರ್​ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಪ್ರೊ.ಎಚ್​.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಹಿರಿಯ ಪತ್ರಕರ್ತ ಹಾಗೂ ಕಥೆಗಾರ ರಘುನಾಥ ಚ.ಹ. ಹಾಗೂ ಲೇಖಕಿ ರೂಪ ಹಾಸನ ಅವರಿಗೆ ಪ್ರೊ.ಎಚ್​.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ಸಂರ್ಷದ ಹಾದಿಯಲ್ಲಿ ದೊಡ ್ಡದೊಡ್ಡ ಸಾಹಿತಿಗಳೆನಿಸಿಕೊಂಡವರು, ಎಡಪಂಥೀಯ ಚಿಂತಕರು ಸ್ವಲ್ಪ ಸಮಾಜವಾದಿ ಚಿಂತನೆಯ ಕಡೆ ವಾಲಿದ ಪರಿಣಾಮ ಸಾಹಿತ್ಯ, ಸಂಸತಿ, ರಾಜಕೀಯ ಇತಿಹಾಸವನ್ನು ಕಲುಷಿತ ಮಾಡಿತು ಎಂದರು.

ಕರ್ನಾಟಕದ ರಾಜಕೀಯ ಚಲನವಲನೆಗಳೇ ನವ್ಯ ಚಳವಳಿಯ ಅಪಾರವಾದ ಪ್ರಭಾವಕ್ಕೆ ಒಳಗಾಗಿದ್ದ ದಿನಗಳಲ್ಲಿ ಒಂದು ವಿಚಿತ್ರವಾದ ಭೂಮಾಲಿಕರ ಪರವಾಗಿ ನಿಂತದ್ದನ್ನು ನೋಡಬಹುದು. ಈ ಅನಿವಾರ್ಯತೆಯೇ ದಲಿತ, ಬಂಡಾಯ ಚಳವಳಿ ಹುಟ್ಟಿಗೆ ಕಾರಣವಾಯಿತು ಎಂದರು.

ಕವಿಗಳಾದ ಸಿದ್ದಲಿಂಗಯ್ಯ, ಕೃಷ್ಣಯ್ಯ, ಬರಗೂರು ರಾಮಚಂದ್ರಪ್ಪ ಯಾವುದೇ ರಿಯಾಯಿತಿಯನ್ನು ಬಯಸದ ಅತ್ಯುತ್ತಮ ಪ್ರಾಧ್ಯಾಪಕರು. ಜಾತಿನಿಷ್ಠವಲ್ಲದ, ಪ್ರಾಮಾಣಿಕವಾದ, ಮಾನವೀಯವಾದ ರಾಜಕೀಯ ತಿಳುವಳಿಕೆಯಿಂದ ಒಂದು ದಿಟ್ಟವಾದ ತಿಳುವಳಿಕೆಯನ್ನು ವಿದ್ಯಾರ್ಥಿಗಳಿಗೆ ಕೊಟ್ಟವರು. ಸರ್ಕಾರಿ ಕಾಲೇಜುಗಳ ಅಧ್ಯಾಪಕರ ಇಂತಹ ಪರಂಪರೆಗೆ ಒಂದು ಉತ್ತಮ ನಿದರ್ಶನವಾಗಿ ಸಣ್ಣಗುಡ್ಡಯ್ಯ ಇದ್ದರು ಎಂದು ರಾಘವೇಂದ್ರರಾವ್​ ತಿಳಿಸಿದರು.

ತುಮಕೂರು ಜಿಲ್ಲೆಗೆ ಸೀಮಿತವಾದ ವಿಶ್ವವಿದ್ಯಾನಿಲಯ ಇದೆ. ಬೌದ್ಧಿಕ ಮತ್ತು ಸೃಜನಶೀಲ ಪರಂಪರೆ ಇದ್ದು ಇದರ ವೈವಿಧ್ಯ ಮತ್ತು ವೈರುಧ್ಯಗಳ ಅಧ್ಯಯನವನ್ನು ಇನ್ನಷ್ಟು ಆಳವಾಗಿ ಮಾಡಬೇಕಾಗಿದೆ. ವಿ.ಚಿಕ್ಕವಿರಯ್ಯ, ಎಚ್​.ಜಿ.ಸಣ್ಣಗುಡ್ಡಯ್ಯ, ಕೆ.ಜಿ.ನಾಗರಾಜಪ್ಪ, ಜಿ.ಎಸ್​.ಸಿದ್ದಲಿಂಗಯ್ಯ, ಬರಗೂರು, ಕೆ.ಬಿ.ಸಿದ್ದಯ್ಯ, ಲಲಿತಾ ಸಿದ್ದಬಸವಯ್ಯ, ಕೆ.ಎಂ.ಶಂಕರಪ್ಪ, ಬೂದಾಳ ನಟರಾಜ್​ ಹೀಗೆ ಹಲವು ಹೆಸರುಗಳಿವೆ. ಈ ಎಲ್ಲಾ ಹೆಸರುಗಳು ಕೂಡ ಕೇವಲ ಹೆಸರುಗಳಾಗಿದ್ದರೆ ಗೌರವ ಡಾಕ್ಟರೇಟ್​ ಕೊಟ್ಟು ಸಮಾಧಾನಪಡಿಸಬಹುದಿತ್ತು. ಇವರೆಲ್ಲರೂ ಬೇರೆ ಬೇರೆ ವಿಚಾರಧಾರೆಗಳನ್ನು ಹೊಂದಿದ್ದವರು. ಚಿಕ್ಕ ಜಿಲ್ಲೆಯಲ್ಲಿ ಇಷ್ಟೊಂದು ವೈವಿಧ್ಯತೆ ಇರುವುದು ಮುಖ್ಯ ಎನಿಸುತ್ತದೆ ಎಂದು ಹೇಳಿದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆವಹಿಸಿದ್ದರು. ಪತ್ರಿಕೋದ್ಯಮಿ ಎಸ್​.ನಾಗಣ್ಣ, ಶಾಂತಾ ಸಣ್ಣಗುಡ್ಡಯ್ಯ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ ಎಂ.ಶೇಠ, ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್​.ರೇಣುಕಪ್ರಸಾದ್​, ಸಹಾಯಕ ಪ್ರಾಧ್ಯಾಪಕ ನಾಗಭೂಷಣ ಬಗ್ಗನಡು ಮತ್ತಿತರರು ಉಪಸ್ಥಿತರಿದ್ದರು.

ಬಿಸಿಲುಬೆಳದಿಂಗಳು ಸಣ್ಣಗುಡ್ಡಯ್ಯ

ಪ್ರೊ.ಸಣ್ಣಗುಡ್ಡಯ್ಯ ಅವರು ಇದೇ ಕಲಾ ಕಾಲೇಜಿನಲ್ಲಿ ಪ್ರೊಫೆಸರ್​ ಆಗಿದ್ದವರು. ಅವರದ್ದು ಬಿಸಿಲು ಬೆಳದಿಂಗಳ ವ್ಯಕ್ತಿತ್ವ. ವಿಮರ್ಶೆಯ ವಿಷಯದಲ್ಲಿ ಅವರು ಬಿಸಿಲು, ಮನುಷ್ಯ ಸಂಬಂಧದಲ್ಲಿ ಬೆಳದಿಂಗಳು. ಸಣ್ಣಗುಡ್ಡಯ್ಯನವರು ಮನುಷ್ಯ ಸಂಬಂಧಗಳಿಗೆ ಬಹಳ ಬೆಲೆಯನ್ನು ಕೊಡುತ್ತಿದ್ದರು. ವಿಮರ್ಶೆ ವಿಷಯಕ್ಕೆ ಬಂದಾಗ ಆ ಯಾವ ಗುಣಗಳು ಇರುತ್ತಿರಲಿಲ್ಲ. ಸಣ್ಣಗುಡ್ಡಯ್ಯನವರ ವ್ಯಕ್ತಿತ್ವ ಬಿಸಿಲು ಬೆಳದಿಂಗಳ ವ್ಯಕ್ತಿತ್ವವಾಗಿತ್ತು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net