

ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡದಂತೆ ಸರ್ಕಾರ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಲಹೆ ನೀಡುತ್ತಲೇ ಛೇಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಸಿಎಂ ಎಚ್ಡಿಕೆ ಸರಣಿ ಟ್ವೀಟ್ ಮಾಡಿ ಕರೊನಾ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದೇ ಮುಂಜಾಗ್ರತಾ ಕ್ರಮ. ಇತರ ರೋಗಿಗಳ ಜತೆ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಸರಿಯೆ? ರಾಜ್ಯದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಖಾಲಿ ಉಳಿದಿವೆ. ಅವುಗಳನ್ನು ಕರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆಗಾಗಿ ಪ್ರತ್ಯೇಕಿಸಿ ಇಡುವ (ಕ್ವಾರಂಟೈನ್)ಕೇಂದ್ರಗಳಾಗಿ ಪರಿವರ್ತಿಸಬೇಕು. ಜನನಿಬಿಡ ಪ್ರದೇಶಗಳಿಂದ ಕ್ವಾರಂಟೈನ್ ಕೇಂದ್ರಗಳನ್ನು ತೆರೆದು, ಸೋಂಕಿತರು ಇರುವಲ್ಲಿಯೇ ರಕ್ತದ ಮಾದರಿ ಸಂಗ್ರಹಕ್ಕೆ ವ್ಯವಸ್ಥೆಯಾಗಬೇಕು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯನಿರ್ವಹಿಸಲಿ, ಪರಸ್ಪರರ ನಡುವೆ ಸಹಕಾರವಿರಲಿ, ಇದು ಪ್ರಚಾರ ಪಡೆಯುವ ಪ್ರಹಸನವಾಗಬಾರದು. ಜನರಲ್ಲಿ ಗೊಂದಲ ಮೂಡದಿರಲಿ ಎಂದು ಕಾಲೆಳೆದಿದ್ದರು. ಇದಕ್ಕೆ ಪ್ರತಿಯಾಗಿ ಸಚಿವ ಸುಧಾಕರ್ ಸರಣಿ ಟ್ವೀಟ್ ಮಾಡಿದ್ದು, ಕರೊನಾ ವೈರಸ್ ನಿರ್ವಹಣೆ ವಿಚಾರದಲ್ಲಿ ಮಾಜಿ ಸಿಎಂ ಬಾಲಿಶ ಹೇಳಿಕೆ ಗಮನಿಸಿರುವೆ. ವಿಪತ್ತನ್ನು ಎದುರಿಸಲು ಮುಖ್ಯಮಂತ್ರಿ ಬಿಎಸ್ವೈ ಆದೇಶದಂತೆ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಲ್ಲಿ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ ಎಂದು ಸಚಿವ ಸುಧಾಕರ್ ಟ್ವೀಟ್ನಲ್ಲಿ ಕುಟುಕಿದ್ದಾರೆ.