ಮಾಜಿ ಸಿಎಂ ಸಿದ್ದರಾಮಯ್ಯ ಜತೆ ಬಹಿರಂಗ ಚರ್ಚೆಗೆ ಸಿದ್ಧ, ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು

7-klr-12 HDK (press meet )
Published on

ಕೋಲಾರ: ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ 14 ತಿಂಗಳು ಆಡಳಿತ ನಡೆಸಿದ್ದೇನೆ. ನನ್ನಲ್ಲಿನ ಸ್ವಾಭಿಮಾನವನ್ನು ಮಾರಾಟಕ್ಕಿಟ್ಟು ಅಧಿಕಾರ ನಡೆಸಲು ಬಯಸಲಿಲ್ಲ, ನನ್ನ ಆಡಳಿತದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಸರ್ಟಿಫಿಕೇಟ್ ಬೇಕಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಕಲ್ಲಂಡೂರು ಗ್ರಾಮದ ಪುರಾತನ ಶಿವ ದೇವಾಲಯದ ಮರು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಕೋಲಾರಕ್ಕೆ ಭೇಟಿ ನೀಡಿದ್ದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಆಗಲಿಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಅಧಿಕಾರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕುರಿತು ಅಂಕಿ, ಅಂಶಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.

5 ವರ್ಷ ಉತ್ತಮ ಆಡಳಿತ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಹಾಗಿದ್ದ ಮೇಲೆ ಇವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರ ಸಂಖ್ಯೆ 78ಕ್ಕೆ ಇಳಿದಿದ್ದು ಏಕೆ ಎಂದು ವ್ಯಂಗ್ಯವಾಡಿದರಲ್ಲದೆ, 2013ರಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ಪಕ್ಷ ಕಟ್ಟದಿದ್ದರೆ ಕಾಂಗ್ರೆಸ್ ಎಲ್ಲಿರುತ್ತಿತ್ತು ಎಂದು ಟಾಂಗ್ ನೀಡಿದರು.

ಜೆಡಿಎಸ್‌ನ ಶಕ್ತಿ ಗೊತ್ತಿದೆ:

ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜನತೆ ನನಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಿರಲಿಲ್ಲ. ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಜೆಡಿಎಸ್ ಶಕ್ತಿ ಏನೆಂದು ಗೊತ್ತಿದೆ. ಜನರ ಹತ್ತಿರಕ್ಕೆ ಹೋಗುತ್ತೇವೆ. ನನ್ನ ಅವಧಿಯಲ್ಲಿನ ಕೆಲಸಗಳು ಜನರ ಹೃದಯದಲ್ಲಿದ್ದರೆ ಮತ್ತೊಮ್ಮೆ ಅಧಿಕಾರ ನೀಡುವಂತೆ ಮನವಿ ಮಾಡುತ್ತೇನೆ ಎಂದು ಎಚ್‌ಡಿಕೆ ತಿಳಿಸಿದರು.

ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಸ್ಪರ್ಧಿಸುವ ವಿಚಾರ ನನಗೇನೂ ಗೊತ್ತಿಲ್ಲ, ಸ್ವತಂತ್ರ ಅಭ್ಯರ್ಥಿಯಾಗಿ ಅನಿಲ್‌ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಎಚ್.ಡಿ.ರೇವಣ್ಣ ಹಾಜರಿ ಕಾಕತಾಳೀಯ. ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿರುವ ಸಮಾನ ಮನಸ್ಕ ಶಾಸಕರ ಮತ ಪಡೆದು ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನನ್ನ ಜತೆ ಯಾರೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಶಾಸಕರನ್ನು ಸಂಪರ್ಕಿಸಿಲ್ಲ:

ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಲ್ಲಿ ಗೊಂದಲ ಇರೋದು ಗಮನಿಸಿದ್ದೇನೆ. ನಾನು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ. ಸರ್ಕಾರದ ಕೆಲಸಗಳಲ್ಲಿ ಮೂಗು ತೂರಿಸೋದು ಸರಿಯಲ್ಲ. ಸಮಸ್ಯೆ ಸರಿಪಡಿಸಿಕೊಳ್ಳೊದು ಬಿಜೆಪಿಗೆ ಬಿಟ್ಟ ವಿಚಾರ. ಯಡಿಯೂರಪ್ಪ ಅವರಿಗೆ ಇರುವ ಅನುಭವದಲ್ಲಿ ಇದರಿಂದ ಹೊರ ಬರಬಹುದು. ಅಥವಾ ಏನು ಬೇಕಾದರೂ ಆಗಬಹುದು. ಕೋಡಿಮಠ ಸ್ವಾಮೀಜಿಯ ಭವಿಷ್ಯ ಏನಾಗುತ್ತದೋ ನೋಡೋಣ ಎಂದರು.

ಯಡಿಯೂರಪ್ಪನವರ ಮೇಲೆ ಸಿದ್ದರಾಮಯ್ಯ ಅನುಕಂಪ ತೋರಿಸುತ್ತಿದ್ದಾರೆ. ಆದರೆ 14 ತಿಂಗಳು ನಾನು ಹಿಂಸೆ ಪಟ್ಟಾಗ ಅನುಕಂಪ ತೋರಿಸಲಿಲ್ಲ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರಕ್ಕೆ ಹಣ ನೀಡಿದ್ದು ನನ್ನ ಕಾಲದಲ್ಲಿ ಎಂಬುದನ್ನು ಮನವರಿಕೆ ಮಾಡಿಕೊಳ್ಳಲಿ ಎಂದು ನೆನಪು ಮಾಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್‌ಸಿ ಚೌಡರೆಡ್ಡಿ, ಜೆಡಿಎಸ್ ರಾಜ್ಯಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಕೋಲಾರ ತಾಲೂಕು ಅಧ್ಯಕ್ಷ ಬಾಬು ಮೌನಿ, ಮುಖಂಡರಾದ ಮೂರಂಡಹಳ್ಳಿ ಗೋಪಾಲ್, ರಾಜೇಶ್ವರಿ, ವಕೀಲ ಕಲ್ಲಂಡೂರು ಲೋಕೇಶ್, ಸಿಆರ್‌ಎಂ ಹರೀಶ್, ಎಪಿಎಂಸಿ ಪುಟ್ಟರಾಜು, ನಗರಸಭಾ ಸದಸ್ಯ ರಾಜೇಶ್, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net