

ಮಂಡ್ಯ: ದೀಪಾವಳಿ ಹಬ್ಬಕ್ಕೆ ಕೊಡುಗೆ ಕೊಡುತ್ತಿದ್ದೇವೆಂದು ಹೇಳಿ ರಾಜ್ಯ ಸರ್ಕಾರ, ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ ಖಾತಾ ಸೋಗಿನಲ್ಲಿ 15,000 ಕೋಟಿ ರೂ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ಜಾಹೀರಾತು ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಇದಾಗಿದೆ. ಬೆಂಗಳೂರು ನಗರ ಜನರಿಗೆ ದೀಪಾವಳಿ ಕೊಡುಗೆ ನೀಡಲು ಶಾಕ್ ಕೊಡುತ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ 500 ರೂ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ. 30*40 ನಿವೇಶನಕ್ಕೆ 4 ರಿಂದ 8 ಲಕ್ಷ ರೂವರೆಗೂ ಕಸಿದುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷ ರೂ ಕೊಡಬೇಕು. ಎ ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದರು.
ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡುವುದು ಎಂದರೆ ಹೀಗೆನಾ?. ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲಿ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚುವುದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ. ಜೆಡಿಎಸ್ ಕೊಡುಗೆ ಏನೆಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ. ಇವರು ಎಷ್ಟು ಕೊಟ್ಟಿದ್ದಾರೆ ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಸವಾಲು ಹಾಕಿದರು.
ಎಚ್‌ಎಂಟಿ, ಕುದುರೆಮುಖ ಅದಿರು ಕಾರ್ಖಾನೆ ಪುನಶ್ಚೇತನ
ರಾಜ್ಯದ ಪ್ರತಿಷ್ಠಿತ ಎಚ್‌ಎಂಟಿ ಹಾಗೂ ಕುದುರೆಮುಖ ಅದಿರು ಕಾರ್ಖಾನೆ ಪುನಾರಾರಂಭಕ್ಕೆ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಜಪಾನ್‌ಗೆ ತಜ್ಞರ ತಂಡ ಕಳುಹಿಸಿ ತಂತ್ರಜ್ಞಾನ ಮಾಹಿತಿ ಪಡೆಯಲಾಗಿದ್ದು, ಡಿಸೆಂಬರ್ ಒಳಗೆ ಭದ್ರಾವತಿ ಮತ್ತು ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪರಿಸರ ಕಾಳಜಿ ಉದ್ದೇಶದಿಂದ ವಿದ್ಯುತ್ ಚಾಲಿತ ಬಸ್‌ಗಳ ಸಂಚಾರಕ್ಕೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 10 ಸಾವಿರ ಬಸ್‌ಗಳನ್ನು ಪ್ರಸಕ್ತ ವರ್ಷ ನೀಡಲಾಗುತ್ತಿದೆ. ಈ ಪೈಕಿ 4,500 ಬಸ್‌ಗಳನ್ನು ಬೆಂಗಳೂರಿಗೆ ನೀಡಲಾಗುತ್ತದೆ. ನೂತನ ಕೈಗಾರಿಕೆಗಳ ಸ್ಥಾಪನೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ. ಆದರೆ ರಾಜ್ಯವನ್ನು ಪ್ರತಿನಿಧಿಸುವ ಐವರು ಕೇಂದ್ರ ಸಚಿವರೊಟ್ಟಿಗೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷೃವತಾಳಿರುವುದು ಸರಿಯಲ್ಲ. ನೆರೆ ಹಾವಳಿಯಿಂದ ನಲುಗಿರುವ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ರೈತರಿಗೆ ಅಗತ್ಯ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕಲಬುರಗಿಯಲ್ಲಿ ರೈತರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಕಾಳಜಿ ತೋರದ ಕ್ರಮ ಸರಿಯಲ್ಲ. ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ ಕೇಂದ್ರ ಸರ್ಕಾರ ಆಸಕ್ತಿ ತಳೆದಿದ್ದು, ರಾಜ್ಯ ಸರ್ಕಾರದ ನಡವಳಿಕೆ ಬದಲಾಗಬೇಕು. ರಾಜ್ಯದ ಅಭಿವೃದ್ದಿಗೋಸ್ಕರ ಕೇಂದ್ರದ ಜತೆ ಸಂಘರ್ಷ ಮಾಡಿಕೊಳ್ಳುವುದು ಸರಿಯಲ್ಲವೆಂದರು.