ರಾಜಕೀಯ ಬದಿಗಿಟ್ಟು ಗ್ರಾಮಾಭಿವೃದ್ಧಿಗೆ ಸಮರ್ಪಿಸಿಕೊಳ್ಳಿ: ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಎಚ್‌ಡಿಕೆ ಕರೆ

6-cpt-1pa
Published on

ಚನ್ನಪಟ್ಟಣ: ಗ್ರಾಪಂ ಚುನಾವಣೆ ಮುಗಿದಿದ್ದು ಗೆದ್ದ ಅಭ್ಯರ್ಥಿಗಳು ರಾಜಕೀಯ ಬದಿಗಿಟ್ಟು ಗ್ರಾಮಗಳ ಅಭಿವೃದ್ಧಿಗೆ ಸಮರ್ಪಿಸಿಕೊಳ್ಳಬೇಕು ಎಂದು ಜೆಡಿಎಸ್ ಬೆಂಬಲಿತ ನೂತನ ಗ್ರಾಪಂ ಸದಸ್ಯರಿಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕರೆ ನೀಡಿದರು.

ಕೆಂಗಲ್ ಬಳಿಯ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ನೂತನ ಗ್ರಾಪಂ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪಕ್ಷದ ಬೆಂಬಲಿತರು ಆಯ್ಕೆಯಾಗಿದ್ದಾರೆ. ಗ್ರಾಮೀಣ ಜನತೆ ನಿಮ್ಮ ಮೇಲೆ ವಿಶ್ವಾಸವಿಟ್ಟು ನೀಡಿರುವ ಅಧಿಕಾರಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಿ ಎಂದರು.

ಕೆಲ ಗ್ರಾಮಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಂದಾಗಿ ಕೆಲ ಅಭ್ಯರ್ಥಿಗಳು ಸೋತಿದ್ದಾರೆ. ರಾಜಕೀಯ ಪೈಪೋಟಿಯಿಂದಾಗಿ ಹಲವರು ಹಣ ವ್ಯಯಿಸಿ ಗದ್ದುಗೆ ಹಿಡಿದಿದ್ದಾರೆ. ಕಾನೂನುಬದ್ಧವಾಗಿ ಕಾಮಗಾರಿಗಳನ್ನು ನಿರ್ವಹಿಸಿ ನಿಮ್ಮ ವೈಯಕ್ತಿಕ ಬದುಕಿನತ್ತವೂ ಗಮನಹರಿಸಬೇಕಾಗಿದೆ. ಯಾವುದೇ ಆರೋಪಗಳಿಗೆ ತುತ್ತಾಗದೆ ಪಕ್ಷಕ್ಕೆ ಗೌರವ ತರುವ ಕೆಲಸ ಮಾಡಿ ಎಂದರು.

ವಿರೋಧಿಗಳಿಗೆ ತಕ್ಕಪಾಠ: ತಾಲೂಕಿನಲ್ಲಿ ಪಕ್ಷ ಬೆಂಬಲಿತರನ್ನು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಿಸುವ ಮೂಲಕ ವಿರೋಧಿಗಳಿಗೆ ತಕ್ಕಪಾಠ ಕಲಿಸಿದ್ದೀರಿ. ಈ ಹಿಂದಿನಿಂದಲೂ ನನ್ನ ಮೇಲೆ ನೀವಿಟ್ಟಿರುವ ಅಭಿಮಾನಕ್ಕೆ ಕೃತಜ್ಞನಾಗಿದ್ದೇನೆ. ತಾಲೂಕನ್ನು ಅಭಿವೃದ್ಧಿಗೊಳಿಸುವ ಮೂಲಕ ಎಲ್ಲರ ಖುಣ ತೀರಿಸಲಿದ್ದೇನೆ. ಗೆದ್ದಿರುವ ಪಕ್ಷ ಬೆಂಬಲಿತ ಸದಸ್ಯರು ಯಾವುದೇ ಅಸೆ ಆಮಿಷ ಹಾಗೂ ಒತ್ತಡಕ್ಕೆ ಒಳಗಾಗದೆ ತಾಲೂಕಿನ ಅಭಿವೃದ್ಧಿಗಾಗಿ ನನ್ನೊಂದಿಗೆ ನಿಲ್ಲಬೇಕು ಎಂದು ಎಚ್‌ಡಿಕೆ ಮನವಿ ಮಾಡಿದರು.

32 ಗ್ರಾಪಂಗಳ ನೂತನ ಗ್ರಾಪಂ ಸದಸ್ಯರು ಮತ್ತು ಆಯಾ ಭಾಗದ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದನಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ಪಕ್ಷದ ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಎಸ್.ಲಿಂಗೇಶ್‌ಕುಮಾರ್, ಸಿಂ.ಲಿಂ.ನಾಗರಾಜು, ಬೋರೆವೆಲ್ ರಾಮಚಂದ್ರು, ವಡ್ಡರಹಳ್ಳಿ ರಾಜಣ್ಣ, ಲಾಯರ್ ಹನುಮಂತಯ್ಯ, ಯುವಘಟಕದ ಅಧ್ಯಕ್ಷ ವಿನೋದ್‌ಕುಮಾರ್, ಮಾಜಿ ತಾಪಂ ಸದಸ್ಯರಾದ ಗುರುಕುಮಾರ್, ಭಾನುಪ್ರಸಾದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತಪ್ಪುಕಾಣಿಕೆ ಕಟ್ಟುವೆ: ಜ.15ರಂದು ಮಾಗಡಿ ತಾಲೂಕಿನ ಜಾಲಮಂಗಲದ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ತಪ್ಪು ಕಾಣಿಕೆ ಸಲ್ಲಿಸಿ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜಕೀಯ ಶಕೆ ಆರಂಭಿಸಲಿದ್ದೇನೆ ಎಂದು ಮಾಜಿ ಸಿಎಂ ಎಚ್‌ಡಿಕೆ ಘೋಷಿಸಿದರು.

2004 ಚುನಾವಣೆಯ ವೇಳೆ ಅಲ್ಲಿನ ಜನತೆ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಪೂಜೆಗೆ ಕರೆದುಕೊಂಡು ಹೋಗಿದ್ದರು. ಪೂಜೆ ಮುಗಿಸಿ ಹೊರಬಂದಾಗ ಪಕ್ಷದ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಿದ್ದರು. ಆಗ ನನಗೆ ಯಾವ ಪದವಿಯ ಅಸೆಯಿಲ್ಲ, ಜನಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಇನ್ನು ಮುಂದೆ ಈ ರೀತಿ ಘೋಷಣೆ ಕೂಗಬೇಡಿ ಎಂದು ವಿನಂತಿಸಿಕೊಂಡೆ. ಆ ದೇವರ ಆಶೀರ್ವಾದ ನಮ್ಮ ಕಾರ್ಯಕರ್ತರ ಬಾಯಲ್ಲಿ ಬಂದಿರಬಹುದು. ಆದರೆ, ಅಂದು ನಾನು ಅದನ್ನು ನಿರಾಕರಿಸಿದೆ. ತದನಂತರ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೂ ಪೂರ್ಣಪ್ರಮಾಣದಲ್ಲಿ ಅಧಿಕಾರ ನಿರ್ವಹಿಸಲು ಸಾಧ್ಯವಾಗಿಲ್ಲ. ಎರಡು ಬಾರಿ ಅವಕಾಶ ದೊರೆತರೂ, ಸ್ವತಂತ್ರ ಹಾಗೂ ಪೂರ್ಣವಾಗಿ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಂದು ಆ ದೇಗುಲದಲ್ಲಿ ಕಾರ್ಯಕರ್ತರ ಜಯಘೋಷ ನಿರಾಕರಿಸಿದ್ದು, ನನ್ನ ಮನಸ್ಸಿನಲ್ಲಿ ಗೊಂದಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸಂಕ್ರಾಂತಿಯ ಹಿನ್ನೆಲೆಯಲ್ಲಿ ಜ.15 ರಂದು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇವರಿಗೆ ತಪ್ಪುಕಾಣಿಕೆ ಕಟ್ಟಲಿದ್ದೇನೆ. ಅಲ್ಲಿಂದ ಪಕ್ಷದ ಸಂಘಟನೆಗೆ ವಿನೂತನವಾಗಿ ಮುಂದಡಿ ಇಡಲಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net