

ಶ್ರೀನಿವಾಸಪುರ: ರಾಜ್ಯದಲ್ಲಿ ಜೆಡಿಎಸ್ ಮುಳುಗುವ ಹಂತದಲ್ಲಿದೆ. ಅದಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮುಸ್ಲಿಮರನ್ನು ಓಲೈಸಲು ಮಂಗಳೂರಿನ ಘಟನೆ ಬಗ್ಗೆ ನಕಲಿ ಸಿಡಿ ಬಿಡುಗಡೆಗೊಳಿಸಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರಿನ ಘಟನೆ ಬಗ್ಗೆ ಸಿಸಿ ಕ್ಯಾಮರಾ ಆಧರಿತ 30 ಸಿಡಿ ಬಿಡುಗಡೆಗೊಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ನಾನು ಅವರನ್ನು ಬಹಳ ವರ್ಷದಿಂದ ಹತ್ತಿರದಿಂದ ನೋಡಿದ್ದೇನೆ. ಅವರದ್ದು, ಹಿಟ್ ಆ್ಯಂಡ್ ರನ್ ನೇಚರ್. ಅವರು ಆರೋಪ ಮಾಡಿದ ಪ್ರಕರಣ ಕೊನೆಗಾಣಿಸಿದ್ದು ಇತಿಹಾಸದಲ್ಲಿಲ್ಲ ಎಂದು ಹೇಳಿದರು.
ಕಾಶ್ಮೀರ ಹಾಗೂ ಪೌರತ್ವ ಸಮಸ್ಯೆಯಿಂದ ಮಾಜಿ ಮುಖ್ಯಮಂತ್ರಿಗಳಿಗೆ ಆತಂಕ ಶುರುವಾಗಿದೆ. ಹಾಗಾಗಿ ಜೆಡಿಎಸ್ ಮಂಗಳೂರು ಘಟನೆ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ನಕಲಿ ಸಿಡಿ ತಯಾರಿಸಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ಇದ್ದ ಪೊಲೀಸರು ಈಗಲೂ ಇದ್ದಾರೆ. ಅದೇ ಸಿಸ್ಟಂ ಮುಂದುವರಿದಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಮುಖಂಡರಾದ ಎ.ಎನ್.ಜಯರಾಮರೆಡ್ಡಿ, ಈ ಶಿವಣ್ಣ, ವೆಂಕಟೇಗೌಡ, ಕೊಟ್ರಗೂಳಿ ನಾರಾಯಣಸ್ವಾಮಿ, ರವೀಂದ್ರಗೌಡ, ರಾಮಾಂಜಿ, ಬಲ್ತಮರಿ ರೆಡ್ಡಪ್ಪ, ವೆಂಕಟರಾಮರೆಡ್ಡಿ, ಗಿರಿ, ನಾರಾಯಣಸ್ವಾಮಿ ಇತರರು ಇದ್ದರು.
ಪೊಲೀಸ್ ಅಧಿಕಾರಿಗಳ ಅಮಾನತು: ಕೋಲಾರದಲ್ಲಿ ನಡೆದ ಪೌರತ್ವ ಪರ ಜನಜಾಗೃತಿ ರ‌್ಯಾಲಿಯಲ್ಲಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಅಪರಾಧ. ಇದನ್ನು ನಿಭಾಯಿಸುವಲ್ಲಿ ಜಿಲ್ಲಾ ಪೊಲೀಸ್ ವಿಫಲವಾಗಿದೆ. ಲಾಠಿ ಚಾರ್ಜ್ ಮಾಡಿದವರು ಹಾಗೂ ಆದೇಶ ಕೊಟ್ಟವರನ್ನು ಅಮಾನತು ಮಾಡಬೇಕು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.