ಸಮಾಜ ಒಡೆಯಲು ಅವಕಾಶ ಕೊಡಲ್ಲ ; ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡ ಗುಡುಗು

03Gubbi Photo 02
Published on

ಗುಬ್ಬಿ: ನಾನು ಜೀವಂತ ಇರೋವರೆಗೆ ನಮ್ಮ ಸಮಾಜ ಒಡೆಯಲು ಬಿಡುವುದಿಲ್ಲ, ನಮ್ಮ ಸಮಾಜವನ್ನು ಒಡೆದು ನಮ್ಮ ಶಕ್ತಿ ನಾಶ ಮಾಡಲಿಕ್ಕೆ ಹೊರಟಿದ್ದಾರೆ. ಅದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಟ್ಟಣ ಹೊರವಲಯದ ಹೇರೂರು ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜೆಡಿಎಸ್ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಸಣ್ಣ ರೈತ ಕುಟುಂಬದಿಂದ ಬಂದ ನಾನು ಪ್ರಾದೇಶಿಕ ಪಕ್ಷದ ಮಹತ್ವವನ್ನು ರಾಜ್ಯದ ಜನತೆಗೆ ತೋರಿಸಿದ್ದೇನೆ. ನಮ್ಮ ಸಮುದಾಯವನ್ನೇ ಒಡೆದು ರಾಜಕಾರಣ ಮಾಡುವ ಕೆಲ ಪುಣ್ಯಾತ್ಮರು ದುರಂಹಕಾರದಲ್ಲೇ ಅಪಪ್ರಚಾರ ಮಾಡಿದ್ದಾರೆ. ಇಂತಹವರಿಗೆ ಉತ್ತರ ನೀಡುವವರು ನೀವುಗಳು. ಹಾಗಾಗಿ, ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಭಾವುಕರಾದರು.

ಸಾಮಾಜಿಕ ನ್ಯಾಯ ಒದಗಿಸಿದ ಜೆಡಿಎಸ್ ಇಂದಿಗೂ ಜಾತ್ಯತೀತ ನಿಲುವು ತಾಳಿದೆ. ಅಹಿಂದ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಿದ ಜೆಡಿಎಸ್ ಶಕ್ತಿ ಎಂದಿಗೂ ಕುಂದಲ್ಲ. ರಾಜ್ಯದಲ್ಲಿ ಮತ್ತೆ ಹೋರಾಟದ ಮೂಲಕ ಪಕ್ಷ ಸದೃಢಗೊಳಿಸುತ್ತೇನೆ. ನಮ್ಮನ್ನು ತುಳಿಯಲು ಮುಂದಾದದವರಿಗೆ ಪಾಠ ಕಲಿಸಲು ಕಾರ್ಯಕರ್ತರು ಸಜ್ಜಾಗಬೇಕು. ಇದು ಆವೇಶದ ನುಡಿಯಲ್ಲ. ನೋವಿನ ನಿವೇದನೆ ಎಂದು ಕೈ ಮುಗಿದು ಮನವಿ ಮಾಡಿದರು.

ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಜಿಪಂ ಮಾಜಿ ಸದಸ್ಯರಾದ ಯಶೋಧಮ್ಮ ಶಿವಣ್ಣ, ಜಿ.ರಾಮಾಂಜಿನಪ್ಪ, ಮುಖಂಡರಾದ ಎಂ.ಗಂಗಣ್ಣ, ಬಿ.ಎಸ್.ನಾಗರಾಜು, ಶಿವಲಿಂಗಯ್ಯ, ಕೊಂಡ್ಲಿ ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್, ಬೆಳ್ಳಿ ಲೋಕೇಶ್, ನರಸೇಗೌಡ, ನರಸಿಂಹಮೂರ್ತಿ ಇತರರು ಇದ್ದರು.

ಜಿಲ್ಲೆಯನ್ನು ಜೆಡಿಎಸ್ ಮರೆಯೋಲ್ಲ: ತುಮಕೂರು ಜಿಲ್ಲೆಯನ್ನು ಜೆಡಿಎಸ್ ಮರೆಯುವುದಿಲ್ಲ. ಪಕ್ಷದ ಸದೃಢತೆಗೆ ಇದು ತವರೂರು ಆಗಿದೆ. ವಿಶೇಷ ಗೌರವ ಈ ಜಿಲ್ಲೆ ಮೇಲೆ ಇದ್ದೇ ಇದೆ. ಆದರೆ, ಇಲ್ಲಿನ ಕೆಲ ರಾಜಕೀಯ ಚಟುವಟಿಕೆ ಸಾಕಷ್ಟು ನನಗೆ ನೋವು ನೀಡಿದೆ. ನಮ್ಮವರಿಂದಲೇ ಆಗುತ್ತಿರುವ ನೋವು ಹೇಳತೀರದು. ನಮ್ಮಿಂದಾದ ಅನ್ಯಾಯವೇನು ಎಂಬುದು ತಿಳಿಯುತ್ತಿಲ್ಲ. ಎಲ್ಲ ಜನಾಂಗವನ್ನು ಒಗ್ಗೂಡಿಸಿ ಪಕ್ಷ ಸಾಗಿದೆ ಎಂದು ದೇವೇಗೌಡ ಹೇಳಿದರು. ಗ್ರಾಮ ಸ್ವರಾಜ್ಯ ದೇವೇಗೌಡರ ಕನಸಾಗಿದೆ. ಇದರ ಸಾಕಾರಕ್ಕೆ ಈ ಚುನಾವಣೆ ಗೆಲುವು ಸಾಕ್ಷಿಯಾಗಬೇಕಿದೆ. ಸಾಮಾಜಿಕ ನ್ಯಾಯ ಕಲ್ಪಿಸುವ ಶಕ್ತಿ ಜೆಡಿಎಸ್‌ಗಿದೆ. ಜನರಿಗೆ ಬೇಸರ ತಂದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಗುಡುಗಿದರು.

ಕುಮಾರಣ್ಣನ ಸರ್ಕಾರ ಸ್ಥಾಪಿಸೋಣ: ಸಾರ್ವತ್ರಿಕ ಚುನಾವಣೆಯಂತೆ ಮೆರುಗು ಪಡೆದ ವಿಧಾನ ಪರಿಷತ್ ಚುನಾವಣೆ ಸಲ್ಲದ ಕುತಂತ್ರ ರಾಜಕಾರಣಕ್ಕೆ ಸಾಕ್ಷಿಯಾಗುತ್ತಿದೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತಗಳು ಗೆಲುವು ಸಾಧಿಸುವಷ್ಟಿದೆ. ಚುರುಕಿನ ಕೆಲಸ ಮಾಡಿ ದೇವೇಗೌಡರನ್ನು ನಾನೇ ಸೋಲಿಸಿದೆ ಎಂದು ಹೇಳಿಕೊಂಡವರನ್ನು ಸೋಲಿಸೋಣ. ಜತೆಗೆ ಮುಂದಿನ 2023ಕ್ಕೆ ಕುಮಾರಣ್ಣನ ಸರ್ಕಾರ ಸ್ಥಾಪಿಸೋಣ ಎಂದು ಗ್ರಾಮಾಂತರ ಶಾಸಕ ಬಿ.ಸಿ.ಗೌರಿಶಂಕರ್ ಕಾರ್ಯಕರ್ತರನ್ನು ಹುರಿದುಂಬಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net