

ಕೆ.ಆರ್.ನಗರ: ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾಗಿ ನೇಮಕವಾಗಿರುವ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಕುಮಾರ್ ಅವರ ಪಕ್ಷ ನಿಷ್ಠೆಯನ್ನು ವರಿಷ್ಠರು ಗುರುತಿಸಿ ಗೌರವಿಸಿರುವುದು ಹೆಮ್ಮೆಪಡುವ ವಿಚಾರ ಎಂದು ವಕೀಲ ಎ.ತಿಮ್ಮಪ್ಪ ಹೇಳಿದರು.
ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಜೆಡಿಎಸ್ ಕಚೇಯಲ್ಲಿ ಶುಕ್ರವಾರ ನಗರ ಜೆಡಿಎಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊದಲ ಬಾರಿಗೆ ಸಮಿತಿಯ ಸದಸ್ಯರನ್ನಾಗಿ ನಮ್ಮೆಲ್ಲರ ನಾಯಕ ಎಚ್.ಸಿ.ಕುಮಾರ್ ಅವರನ್ನು ನೇಮಕ ಮಾಡಿರುವುದು ಎಲ್ಲರಿಗೂ ಸಂದ ಗೌರವ ಎಂದರು.
ಮುಂದಿನ ದಿನಗಳಲ್ಲಿ ಇರುವ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡುವುದರ ಜತೆಗೆ ಅರ್ಹ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಅಲ್ಲದೆ ಇವರ ನೇಮಕಕ್ಕೆ ಕಾರಣರಾದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ನಗರ ಜೆಡಿಎಸ್ ಅಧ್ಯಕ್ಷ ಸಂತೋಷ್‌ಗೌಡ ಮಾತನಾಡಿ, ನಮ್ಮ ಜೆಡಿಎಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸ್ಥಾನಮಾನ ನೀಡುತ್ತದೆ ಎಂಬುದಕ್ಕೆ ಎಚ್.ಸಿ.ಕುಮಾರ್ ಅವರೇ ಸಾಕ್ಷಿ. ಪ್ರತಿಯೊಬ್ಬರೂ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ತರುವಲ್ಲಿ ಶ್ರಮಿಸೋಣ ಎಂದು ಹೇಳಿದರು.
ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಯುವ ಜೆಡಿಎಸ್ ಮಾಜಿ ಅಧ್ಯಕ್ಷ ಎಚ್.ಆರ್.ಮಧುಚಂದ್ರ, ಮುಖಂಡರಾದ ಸಿ.ಕೆ.ಮಲ್ಲಪ್ಪ, ನಾಗೇಶ್, ಕೃಷ್ಣಶೆಟ್ಟಿ, ಲೋಕೇಶ್, ಹರೀಶ್, ಜೆ.ಪಿ.ಮಂಜುನಾಥ್ ಇತರರು ಇದ್ದರು.