

ಮಡಿಕೇರಿ:
ಕೇಂದ್ರ ನಾಯಕರು ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಕೊಡಗಿನ ಮಟ್ಟಿಗೆ ಇನ್ನೂ ಗೊಂದಲಗಳು ಮುಂದುವರಿದಿದೆ. ಅದರಲ್ಲೂ ಜೆಡಿಎಸ್ ಒಳಗಡೆಯೇ ಎರಡು ಬಣಗಳು ಆಗುವಂತಾಗಿದೆ. ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಮುಂದಾಳುತನದಲ್ಲಿ ಒಂದು ಬಣ ಈಗಾಗಲೇ ಬಿಜೆಪಿ ಜತೆ ಹೆಜ್ಜೆ ಹಾಕುತ್ತಿದ್ದು, ಪಕ್ಷದ ಮಾಜಿ ಜಿಲ್ಲಾಧ್ಯಕ್ಷ, ಹೆಚ್. ವಿಶ್ವನಾಥ್ ಬೆಂಬಲಿಗ ಕೆ.ಎಂ. ಗಣೇಶ್ ಮಾತ್ರ ತಾವು ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವುದಾಗಿ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಮಡಿಕೇರಿಗೆ ಆಗಮಿಸಿದ್ದ ಮಾಜಿ ಸಂಸದ ಹೆಚ್. ವಿಶ್ವನಾಥ್ ಕೆ.ಎಂ. ಗಣೇಶ್ ಬೆಂಬಲಿಗರ ಜತೆ ಸಭೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಹ್ಮಣಿ ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಕೆ.ಎಂ. ಗಣೇಶ್ ಮಾತನಾಡಿ, ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯಲು ನಿರ್ಧರಿಸಲಾಗಿತ್ತು. ಈ ಸಂದರ್ಭ ಹೆಚ್. ವಿಶ್ವನಾಥ್ ಕರೆ ಮಾಡಿ ತಟಸ್ಥರಾಗಿ ಕೂರುವ ಕಾಲ ಇದಲ್ಲ. ಈ ಚುನಾವಣೆಯಲ್ಲಿ ಮಹಾರಾಜರನ್ನು ಗೆಲ್ಲಿಸಬೇಕಾಗುತ್ತದೆ. ಅವರ ವಂಶಸ್ಥರು ಮೈಸೂರು ಮತ್ತು ಕೊಡಗಿಗೆ ಮಾಡಿರುವ ಕೆಲಸಗಳ ಹಿನ್ನೆಲೆಯಲ್ಲಿ ಯದುವೀರ್ ಅವರನ್ನು ಗೆಲ್ಲಿಸುವ ಅಗತ್ಯವಿದೆ ಎಂದರು.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಹೆಚ್. ವಿಶ್ವನಾಥ್, ಈ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯುವುದಾಗಿ ಹೇಳಿದ್ದ ಕೆ.ಎಂ. ಗಣೇಶ್ ಮತ್ತು ಬೆಂಬಲಿಗರ ಜತೆ ಚರ್ಚೆ ಮಾಡಲಾಗಿದೆ. ಎನ್.ಡಿ.ಎ ಮೈತ್ರಿ ಕೂಟದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಗೆಲ್ಲಿಸಲು ನಾವು ಸಿದ್ಧವಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳಸಲು ತಂತ್ರಗಾರಿಕೆ ಬಳಸಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಮೈಸೂರು-ಕೊಡಗು ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಲು ಸಿದ್ದರಾಮಯ್ಯ ಮೈಸೂರಿನಲ್ಲೇ ವಾಸ್ತವ್ಯ ಮಾಡಿದ್ದಾರೆ. ಎನ್.ಡಿ.ಎ. ಕೂಡ ತನ್ನ ಅಭ್ಯರ್ಥಿಯನ್ನು ಗೆಲುವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದರು.
ನಾನು ಯಾವುದೇ ಪಕ್ಷದಲ್ಲಿ ಇದ್ದರೂ ತಪ್ಪುಗಳನ್ನು ತಪ್ಪು ಎನ್ನುತ್ತೇನೆ. ಸರಿ ಇರುವುದನ್ನು ಯಾವುದೇ ಪಕ್ಷದದ್ದಾದರೂ ಸರಿ ಅಂತ ಒಪ್ಪುತ್ತೇನೆ. ಆದರೆ ರಾಜಕಾರಣದಲ್ಲಿ ಪ್ರಾಮಾಣಿಕತೆ, ಅನುಭವ ಎಲ್ಲವನ್ನೂ ನೋಡಿ ಲೆಕ್ಕಾಚಾರ ಮಾಡಲಾಗುತ್ತದೆ. ಇದನ್ನು ತಪ್ಪಾಗಿ ಭಾವಿಸಬಾರದು. ನಾನು ಕಾಂಗ್ರೆಸ್‌ನಿAದ ಟಿಕೆಟ್ ಕೇಳಿದ್ದನ್ನು ನಕರಾತ್ಮಕವಾಗಿ ಪರಿಗಣಿಸಬಾರದು. ಒಕ್ಕಲಿಗ ಅಭ್ಯರ್ಥಿ ಹಾಕಿರುವುದರಿಂದ ಗೆದ್ದು ಬಿಡ್ತೀವಿ ಎನ್ನುವ ಕಾಂಗ್ರೆಸ್ ಯೋಚನೆ ಸುಳ್ಳು.
ಸಿದ್ಧಾಂತಕ್ಕೆ ವಿರುದ್ದವಾಗಿ ಬಿಜೆಪಿ ಹೋದರೆ ಅದನ್ನ ಕೂಡ ನಾನು ಟೀಕೆ ಮಾಡುತ್ತೇನೆ. ನಾನು ಈಗ ಬಿಜೆಪಿ ಎಂಎಲ್‌ಸಿ ಹಾಗಾಗಿ ಎನ್‌ಡಿಎ ಪರವಾಗಿ ಮತಯಾಚಿಸುತ್ತೇನೆ ಎಂದರು.