

ಕಲಬುರಗಿ: ಕರೊನಾ ಸೋಂಕಿತರ ಚಿಕಿತ್ಸೆಗಾಗಿ ವೈದ್ಯರು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ ಎಲ್ಲೋ ಕೆಲವು ಆಸ್ಪತ್ರೆಗಳು ಮಾತ್ರ ಸೋಂಕಿತರನ್ನು ಅತ್ಯಂತ ಹೀನಾಯವಾಗಿ ನೋಡಿಕೊಳ್ಳುತ್ತಿವೆ. ಅದೇ ರೀತಿಯ ನಿರ್ಲ್ಯಕ್ಷದ ಚಿಕಿತ್ಸೆಯಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೊರೆನಹಳ್ಳಿ ಗ್ರಾಮದ ಮುರಾರಿರಾವ್ ಹೆಸರಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅಲ್ಲಿ ಅಲ್ಲಿ ಸೋಂಕಿತ ವೃದ್ಧನ ಕೈಯನ್ನು ಮಂಚಕ್ಕೆ ಕಟ್ಟಲಾಗಿದೆ. ಸರಿಯಾದ ಸಮಯಕ್ಕೆ ಚಿಕಿತ್ಸೆಯಾಗಲೀ ಅಥವಾ ಊಟ ತಿಂಡಿಯನ್ನಾಗಲೀ ಕೊಡಲಾಗುತ್ತಿಲ್ಲ. ಸೋಂಕಿತನ ಮೂಗಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರೂ ಅದನ್ನು ಗಮನಿಸಿದ ಸಿಬ್ಬಂದಿ ಹಾಗೇ ಆಕ್ಸಿಜನ್ ಕೊಟ್ಟು ಹೋಗಿದ್ದಾರೆ. ಅದಾದ ಮೇಲೆ ಆತನ ಸ್ಥಿತಿ ಏನಾಗಿದೆ ಎನ್ನುವುದನ್ನೂ ಗಮನಿಸಿಲ್ಲ.
ರಕ್ತ ಹೆಪ್ಪಾಗಿದ್ದರೂ ಆಕ್ಸಿಜನ್ ಕೊಟ್ಟಿದ್ದನ್ನು ಕಂಡ ಸೋಂಕಿತನ ಕುಟುಂಬಸ್ಥರು ತಾವೇ, ಮೂಗು ಸ್ವಚ್ಛಗೊಳಿಸಿ ಆಕ್ಸಿಜನ್ ಹಾಕಿದ್ದಾರೆ. ಈ ರೀತಿ ವೈದ್ಯರ ನಿರ್ಲ್ಯಕ್ಷದಿಂದಾಗಿ ಸೋಂಕಿತ ಸಾವನ್ನಪ್ಪಿದ್ದಾನೆ.
ಸಾವನ್ನಪ್ಪಿರುವ ಮುರಾರಿರಾವ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದೋರನಹಳ್ಳಿಯ ನಿರ್ದೇಶಕರಾಗಿದ್ದರು ಎನ್ನಲಾಗಿದೆ. ಈ ಸಾವಿನಿಂದಾಗಿ ಕರೊನಾ ಸೊಂಕಿತರಿಗೆ ಕಾಟಚಾರಕ್ಕೆ ಚಿಕಿತ್ಸೆ ಕೊಡ್ತಿದೆಯಾ ಜಿಮ್ಸ್ ಆಸ್ಪತ್ರೆ? ಎನ್ನುವ ಪ್ರಶ್ನೆ ಹುಟ್ಟುಕೊಂಡಿದೆ.