

ಮಳವಳ್ಳಿ: ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಈಡೇರಿಸಿದ ಆತ್ಮತೃಪ್ತಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ಬೆಲೆ ಏರಿಕೆಯಿಂದ ಉಂಟಾಗಿರುವ ಆರ್ಥಿಕ ದುಸ್ಥಿತಿಯಿಂದ ನರಳುತ್ತಿರುವ ಜನಸಾಮಾನ್ಯರನ್ನು ರಕ್ಷಿಸಲು ಕಾಂಗ್ರೆಸ್ ಗ್ಯಾರಂಟಿ ಯೋಜನೆ ನೀಡಿತ್ತು. ಪಂಚ ಗ್ಯಾರಂಟಿಗಳ ಅನುಷ್ಠಾನದಿಂದ ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಉದಾಸೀನ ಮನೋಭಾವ ಹೊಂದಿದೆ. 18 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿರುವ ಮಾಹಿತಿ ನೀಡಿದರೂ ನಯಾಪೈಸೆ ನೀಡಿಲ್ಲ. ಆದರೂ ರೈತರ ಹಿತಕ್ಕಾಗಿ 33 ಲಕ್ಷ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ.ಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ. ಮಂಡ್ಯ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಬೆಂಗಳೂರಿನಲ್ಲಿ ನಾಲ್ಕಾರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಸಮಾಜ ಸೇವೆಯ ಆಶಯದಿಂದ ಲೋಕಸಭೆಗೆ ಸ್ಪರ್ಧಿಸಲು ಮುಂದಾಗಿದ್ದು, ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಚುನಾವಣಾ ಬಾಂಡ್‌ಗಳ ಮೂಲಕ ಅಕ್ರಮ ಹಣ ಸಂಗ್ರಹ ಮಾಡಿರುವ ಬಿಜೆಪಿ ಪಕ್ಷದ ಬಂಡತನವನ್ನು ಸುಪ್ರೀಂಕೋರ್ಟ್ ಬಯಲುಗೊಳಿಸಲು ಮುಂದಾಗಿರುವುದು ಪ್ರಜಾಪ್ರಭುತ್ವದ ಗೆಲುವು. ತತ್ವ ಸಿದ್ಧಾಂತವಿಲ್ಲದ ಜೆಡಿಎಸ್ ಪಕ್ಷ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದೆ. ಅವರಿಗೆ ಸೂಕ್ತ ಪಾಠ ಕಲಿಸಬೇಕು. ಮಳವಳ್ಳಿಯಲ್ಲಿ ಕಾಂಗ್ರೆಸ್ ಪಾರಮ್ಯ ಮುಂದುವರಿಯಬೇಕು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಟಾರ್ ಚಂದ್ರು ಮಾತನಾಡಿ, ಜನಸೇವೆ ಮಾಡುವ ಹಂಬಲದಿಂದ ರಾಜಕೀಯ ಪ್ರವೇಶಿಸಿದ್ದೇನೆ. ನನಗೆ ಹಣ ಮಾಡುವ ಆಗತ್ಯವಿಲ್ಲ. ಶಾಸಕ ನರೇಂದ್ರಸ್ವಾಮಿ ಅವರಂತೆ ಹೆಚ್ಚು ಬಹುಮತದಿಂದ ನನ್ನನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈ ಸತ್ಯವನ್ನು ಮನವರಿಕೆ ಮಾಡಿಕೊಡಲು ರಾಹುಲ್ ಗಾಂಧಿ ಅವರು ದೇಶದ್ದುದಕ್ಕೂ ಪಾದಯಾತ್ರೆ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 19ಸ್ಥಾನಗಳಲ್ಲಿ ಗೆಲುವು ಕಂಡಿರುವ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಶೂನ್ಯ ಗೆಲುವಿನ ಆತಂಕದಿಂದ ಮೈತ್ರಿ ರಾಜಕಾರಣಕ್ಕೆ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದ ಲಾಲಾಸೆಗೆ ಬಲಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಪಟ ನಾಟಕವನ್ನು ರಾಜ್ಯದ ಜನ ತಿರಸ್ಕರಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಗಟ್ಟಿ ನಾಯಕತ್ವದಲ್ಲಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಅವರ ಸವಾಲು ಸ್ವೀಕರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಚಿದಂಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಮುಖಂಡರಾದ ಸುರೇಶ್, ಎಸ್.ಪಿ.ಸತೀಶ್, ಚಿಕ್ಕಲಿಂಗಯ್ಯ, ಜಯಣ್ಣ, ಪ್ರಕಾಶ್, ಅಂಬರೀಷ್, ಆರ್.ಎನ್. ವಿಶ್ವಾಸ್, ಶ್ರೀನಿವಾಸ್, ಸಿದ್ದೇಗೌಡ, ಪುಟ್ಟಬಸವಯ್ಯ, ಸುಷ್ಮಾ ರಾಜು, ಸುಜಾತಾ ಕೆ.ಎಂ ಪುಟ್ಟು, ದೊಡ್ಡಯ್ಯ, ಮಲ್ಲಯ್ಯ, ಸಿ.ಮಾಧು, ಶಿವಮಾದೇಗೌಡ ಇತರರಿದ್ದರು.