ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ

16 june tnp 03
ತಿ.ನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಬಿಜಿಎಸ್ ಬಾಲ ಜಗತ್ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಸೋಮವಾರ ಅಕ್ಷರಾಭ್ಯಾಸ ಮಾಡಲಾಯಿತು.
Published on

ತಿ.ನರಸೀಪುರ: ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಬಾಲ ಜಗತ್ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಜ್ಞಾನಾಂಕುರ ಅಕ್ಷರಾಭ್ಯಾಸ ಆಯೋಜಿಸಲಾಯಿತ್ತು.

ಶಾಲಾವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ, ಶ್ರೀ ಗಣಪತಿಗೆ ಪೂಜೆ ಸಲ್ಲಿಸಿ ಹೋಮ-ಹವನ ಹಾಗೂ ಅಭಿಷೇಕದೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಜತೆಗೆ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶಾಲೆಯ 102 ಮಕ್ಕಳ ಪಾಲಕರು ಅಕ್ಷರಾಭ್ಯಾಸಕ್ಕೆ ಸಾಕ್ಷಿಯಾಗಿದ್ದರು.

ಶಾಲೆಯ ವ್ಯವಸ್ಥಾಪಕ ಬಸವರಾಜು ಮಾತನಾಡಿ, ನಮ್ಮ ಪೂರ್ವಿಕರು, ಹಿರಿಯರು ಶೃಂಗೇರಿ ಶಾರದಾ ಪೀಠದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಕೆಲಸ ಮಾಡುತ್ತಿದ್ದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆರಂಭಿಸಿರುವ ಈ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶಗಳ ಮಕ್ಕಳು ಅಕ್ಷರಾಭ್ಯಾಸ ಮಾಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜಿ ಹಾಗೂ ಮೈಸೂರು ಸಾಕಾಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸೂಚನೆಯಂತೆ ಸಂಸ್ಥೆಯ ಪ್ರತಿಯೊಂದು ಶಾಲೆಯಲ್ಲೂ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ, ನಾಗರಿಕತೆ, ನಮ್ಮ ಆಚಾರ-ವಿಚಾರ ಸಹ ಕಲಿಸಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಬಿಜಿಎಸ್ ಮಠದ ಶಾಲೆಗಳು ಕೆಲಸ ಮಾಡುತ್ತಿವೆ. ಅಕ್ಷಾರಾಭ್ಯಾಸ ಕಾರ್ಯಕ್ರಮದಿಂದ ಪಾಲಕರು ಸಂತಸಗೊಂಡಿದ್ದಾರೆ ಎಂದು ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಸೋಮಣ್ಣ ಮುಖ್ಯಶಿಕ್ಷಕ ಎಂ.ಬಿ.ಪ್ರಶಾಂತ್, ಸಹ ಶಿಕ್ಷಕರಾದ ಶಾಂತಕುಮಾರ್, ಜಗದೀಶ್, ರವಿ, ಲಾವಣ್ಯಾ, ರಮ್ಯಶ್ರೀ, ಮಂಜುಶ್ರೀ, ವಿನೋದ್, ಅನಿತಾ, ಮಮತಾ, ಶಿಲ್ಪಶ್ರೀ, ಗಿರಿಜಾ, ನಾಗನಂದಿನಿ, ಜ್ಯೋತಿ, ದಿವ್ಯಾ, ಎಸ್.ಕಾವ್ಯಶ್ರೀ, ಪೂಜಶ್ರೀ, ಸಿಬ್ಬಂದಿ ಲಕ್ಷ್ಮೀ, ಜ್ಯೋತಿ, ಗೀತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net