

ಅಕ್ಕಿಆಲೂರ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜ್ಞಾನ ಭಾರತಿ ಶಾಲೆಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕಟ್ಟಡ ನಿರ್ವಣವಾಗಿದ್ದು, ಡಿ. 7ರಂದು ಉದ್ಘಾಟನೆಗೊಳ್ಳಲಿದೆ.
ಅಕ್ಕಿಆಲೂರ ಹಾಗೂ ಈ ಭಾಗದಲ್ಲಿ ಯಾವ ಶಿಕ್ಷಣ ಸಂಸ್ಥೆಗಳೂ ಇಲ್ಲದ ಕಾಲದಲ್ಲಿ 1989ರಲ್ಲಿ ಆರಂಭವಾದ ಜ್ಞಾನ ಭಾರತಿ ಶಾಲೆಯು ಕಳೆದ 35 ವರ್ಷಗಳಿಂದ ಗ್ರಾಮೀಣ ಭಾಗದ ಬಡ ವರ್ಗ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಕಡು ಬಡಕುಟುಂಬದ ವಿದ್ಯಾರ್ಥಿಗಳಿಗೆ ದಾನಿಗಳ ಸಹಾಯದಿಂದ ಉಚಿತ ಶಿಕ್ಷಣ ನೀಡಿದ ಜ್ಞಾನ ಭಾರತಿ ಶಾಲೆಯು ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಮಾತ್ರ ಆರಂಭಿಸಿ, ಇದೀಗ ಪ್ರೌಢ ಶಾಲೆಯವರೆಗೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಚಿಟೋ ಚಾಪ್ಸ್, ಕನ್ನಡ ಆಂಗ್ಲ ಮಾಧ್ಯಮ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ, ಬಾಳೂರ ರಸ್ತೆಯಲ್ಲಿರುವ ತಮ್ಮ ತೋಟದಲ್ಲಿ ಹೊಸ ಕಟ್ಟಡಕ್ಕೆ ಭೂದಾನ ಮಾಡಿದ್ದಾರೆ.
ಡಿ. 7ರಂದು ಬೆಳಗ್ಗೆ 8 ಗಂಟೆಯಿಂದ ವಿಶೇಷ ಪೂಜೆ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ 11 ಗಂಟೆಗೆ ಜರುಗಲಿರುವ ಸಮಾರಂಭದಲ್ಲಿ ವಿರಕ್ತಮಠದ ಶಿವಬಸವ ಶ್ರೀ, ಬಾಳೂರ ಅಡವಿಸ್ವಾಮಿಮಠದ ಕುಮಾರ ಶ್ರೀ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ ಸಾನ್ನಿಧ್ಯ ವಹಿಸುವರು. ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ ಅಧ್ಯಕ್ಷತೆ ವಹಿಸುವರು, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಕಟ್ಟಡ ಉದ್ಘಾಟನೆ, ಶಾಸಕ ಶ್ರೀನಿವಾಸ ಮಾನೆ ನಾಮಫಲಕ ಅನಾವರಣ ಮಾಡಲಿದ್ದಾರೆ. ಕೆಎಎಸ್ ಅಧಿಕಾರಿ ವಿಶ್ವನಾಥ ಹಿರೇಮಠ, ಗ್ರಾಪಂ ಅಧ್ಯಕ್ಷ ಮಖಬೂಲ್ ಅಹ್ಮದ್ ರುಸ್ತುಂಖಾನವರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ವಿ. ಸಾಲಿಮಠ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ. ಎಚ್. ಬ್ಯಾಡಗಿ, ಟಾಕನಗೌಡ ಪಾಟೀಲ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.