

ಗುತ್ತಲ: ಹಾವೇರಿ ತಾಲೂಕಿನ ಹಾವಂಶಿ ಮತ್ತು ಶಾಕಾರ ಗ್ರಾಮಗಳು ಹಾಗೂ ಹಾವನೂರ ಸಂಪರ್ಕ ಕಲ್ಪಿಸುವ ತುಂಗಭದ್ರ ನದಿಗೆ ಸೇತುವೆ ನಿರ್ಮಾಣ ಆಗುವವರೆಗೆ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಗುತ್ತಲ ಸಮೀಪದ ಹಾವಂಶಿ ಗ್ರಾಮದಲ್ಲಿ ಭಾನುವಾರ ಸೇತುವೆ ನಿರ್ಮಾಣ ಹೋರಾಟ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು. ಸೇತುವೆ ನಿರ್ಮಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಮಾ.15ರಂದು ಹಾವಂಶಿ ಗ್ರಾಮ ಪಂಚಾಯತಿ ಎದುರು ಹೋರಾಟ ಮಾಡಲು ನಿರ್ಧರಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಒಳಬಸಪ್ಪ ಕಾಮನವರ ಮಾತನಾಡಿ, ಮಳೆಗಾಲದಲ್ಲಿ ತುಂಗಭದ್ರ ನದಿಗೆ ಬಾರಿ ಪ್ರಮಾಣದ ನೀರು ಬಂದ ಸಂದರ್ಭದಲ್ಲಿ ಎರಡೂ ಗ್ರಾಮಗಳು ನಡುಗಡ್ಡೆಯಾಗಿ ಪರಿಣಮಿಸುತ್ತವೆ. ಹಾಗಾಗಿ, ಸೇತುವೆ ನಿರ್ಮಾಣ ಅತ್ಯಗತ್ಯವಾಗಿದೆ. 40 ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ನೀಡಿ ಮರೆಯಾಗುತ್ತಾರೆ. ಈ ಬಾರಿ ಸೇತುವೆ ನಿರ್ಮಾಣ ಮಾಡುವವರೆಗೂ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಂದ್ರಪ್ಪ ಕಾಟೇನಹಳ್ಳಿ, ದೇವೆಂದ್ರಪ್ಪ ಗೊರವರ, ಮುತ್ತಪ್ಪ ಬೆಂಡಿಗೇರಿ, ಚನ್ನವೀರಪ್ಪ ನಡುವಿನಹಳ್ಳಿ, ನಿಂಗಪ್ಪ ಗೊರವರ, ಶಿವಪ್ಪ ಗೊರವರ, ಮಹೇಶಪ್ಪ ಹರಿಜನ, ಲಕ್ಕಪ್ಪ ಬಾರ್ಕಿ, ಗೂರಪ್ಪ ಮರೋಳ, ಹಾಲೇಶ ಕೊಡಬಾಳ, ಫಕ್ಕೀರಪ್ಪ ಶಾಕಾರ, ರಮೇಶ ಬೆಂಡಿಗೇರಿ, ಫಕ್ಕೀರಪ್ಪ ನಡುವಿನಹಳ್ಳಿ, ದಿಳ್ಳೆಪ್ಪ ಬೂದನೂರ, ಶಿವಪ್ಪ ಕರ್ಜಗಿ ಸೇರಿದಂತೆ ಹಾವಂಶಿ ಹಾಗೂ ಶಾಖಾರ ಗ್ರಾಮಸ್ಥರಿದ್ದರು.