ಮನೆಗಳ್ಳತನ ಮಾಡುತ್ತಿದ್ದ ಮೂವರ ಬಂಧನ

4-GTL- ARREST KALLATAN
Published on

ಗುತ್ತಲ: ಗುತ್ತಲ ಹಾಗೂ ರಾಣೆಬೆನ್ನೂರ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡುತ್ತಿದ್ದ ಒಂದೇ ಮನೆಯ ಮೂವರು ಸಹೋದರರನ್ನು ಗುತ್ತಲ ಠಾಣೆಯ ಪೊಲೀಸರು ಬಂಧಿಸಿ ಅವರಿಂದ ಆಭರಣ, ಬೈಕ್ ವಶಪಸಿಕೊಂಡಿದ್ದಾರೆ.
ಆ. 20ರಂದು ಗುತ್ತಲ ಪಟ್ಟಣ ವ್ಯಾಪ್ತಿಯಲ್ಲಿ 3 ಮನೆಗಳು ಕಳ್ಳತನವಾಗಿದ್ದವು. ಸ್ಥಳೀಯ ಠಾಣೆ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ 15 ದಿನಗಳಲ್ಲಿ ಕಳ್ಳರನ್ನು ಬಂಧಿಸಿದ್ದಾರೆ. ಗುತ್ತಲ ಪಟ್ಟಣದಲ್ಲಿ ಅಷ್ಟೇ ಅಲ್ಲದೆ, ರಾಣೆಬೆನ್ನೂರ ತಾಲೂಕಿನಲ್ಲಿ ಕಳ್ಳತನದ ಪ್ರಕರಣವನ್ನು ಬೇಧಿಸಿದ್ದಾರೆ.
ಆರೋಪಿಗಳು ರಾಣೆಬೆನ್ನೂರ ನಗರದ ನಿವಾಸಿಗಳಾಗಿದ್ದು, ಮುಬಾರಕ್ ಅಲಿಯಾಸ್ ಮುಬ್ಬು ಹಸನಅಲಿ ಬ್ಯಾಡಗಿ, ಅಹ್ಮದರಜಾ ಹಸನಅಲಿ ಬ್ಯಾಡಗಿ, ಜಾಫರ್ ಅಲಿಯಾಸ್ ಸಾಧಿಕ ನಜೀರಹ್ಮದ ಬ್ಯಾಡಗಿ ಸಹೋದರರು ಗೌಂಡಿ ಕೆಲಸ ಮಾಡುತ್ತಿದ್ದು, ಐಷಾರಾಮಿ ಜೀವನ ಸಾಗಿಸುವ ಗೀಳಿಗೆ ಬಿದ್ದು ಕಳ್ಳತನಕ್ಕೆ ಇಳಿದಿದ್ದಾರೆ. ಮುಬಾರಕ ಬ್ಯಾಡಗಿ ಪ್ರಕರಣವೊಂದರಲ್ಲಿ ಜೈಲಿನಿಂದ ಬಂದು ಒಂದೇ ವಾರದಲ್ಲಿ ಮತ್ತೆ ಕಳ್ಳತನ ಮಾಡಿ ಜೈಲು ಸೇರುವಂತಾಗಿದೆ. ಬಂಧಿತರಿಂದ 3 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 50 ಸಾವಿರ ರೂ. ಮೌಲ್ಯದ ಬೆಳ್ಳಿಯ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಎಂ.ಎಸ್. ಪಾಟೀಲ, ಸಿಪಿಐ ಸಂತೋಷ ಪವಾರ, ಪಿಎಸ್‌ಐ ಶಂಕರಗೌಡ ಪಾಟೀಲ, ಎಎಸ್‌ಐ ಎಂ.ಎನ್. ಅಂಬಿಗೇರ, ಕಾನ್‌ಸ್ಟೆಬಲ್‌ಗಳಾದ ಉಮೇಶ ಕೆಂಚನಗೌಡ್ರ, ಮಾಲತೇಶ ದೊಡ್ಡಮನಿ, ಸುರೇಶ ಎಂ.ಎಚ್., ಶಿವರಾಜ ಹರಿಜನ, ಗುಡ್ಡಪ್ಪ ಹಳ್ಳೂರ, ಹರೀಶ ಕರ್ಜಗಿ, ಮಹೇಶ ಗೋನಾಳ, ಜಿಲ್ಲಾ ತಾಂತ್ರಿಕ ವಿಭಾಗದ ನೌಕರ ಮಾರುತಿ ಹಾಲಬಾವಿ, ಸತೀಶ ಮಾರಕಟ್ಟಿ ಇತರರಿದ್ದರು.

ಈವರೆಗೆ ಪೊಲೀಸರ ಕೈಗೆ ಸಿಕ್ಕಿರಲಿಲ್ಲ
ಆರೋಪಿ ಮುಬಾರಕ ಅಲಿಯಾಸ್ ಮುಬ್ಬು ಹಸನಅಲಿ ಬ್ಯಾಡಗಿ ಹರಿಹರ, ಹಿರೇಕೆರೂರು ಹಾಗೂ ರಾಣೆಬೆನ್ನೂರಿನಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ. ಒಂದು ವಾರದ ಹಿಂದೆ ಜಾಮೀನಿನ ಮೇಲೆ ಹೊರಗೆ ಬಂದು ಪುನಃ ಕಳ್ಳತನದಲ್ಲಿ ತೊಡಗಿದ್ದಾನೆ. ಮುಬಾರಕನ ಚಿಕ್ಕಪ್ಪ ಜಾಫರ್ ಅಲಿಯಾಸ ಸಾಧಿಕ ನಜೀರಹ್ಮದ ಬ್ಯಾಡಗಿ ಎಂಬಾತ ಕೂಡ ಹಾವೇರಿ, ರಾಣೆಬೆನ್ನೂರ ಹಾಗೂ ಹರನಗಿರಿ ಗ್ರಾಮದಲ್ಲಿ ಕಳ್ಳತನ ಮಾಡಿದ್ದರೂ ಈವರೆಗೆ ಎಲ್ಲಿಯೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net