

ಗುತ್ತಲ: ಸಮೀಪದ ಹೊಸರಿತ್ತಿಯಲ್ಲಿ ಸುಮಾರು 350 ವರ್ಷಗಳ ಹಿಂದಿನ ಇತಿಹಾಸ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪ್ರತಿ ವರ್ಷ ಮಳೆಗಾಲದಲ್ಲಿ ವರದಾ ನದಿ ಪ್ರವಾಹದಿಂದ ಜಲಾವೃತವಾಗುತ್ತಿದೆ. ರಾಜ್ಯ, ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರಿಗೆ ಶ್ರಾವಣ ಮಾಸದಲ್ಲಿ ರಾಯರ ವೃಂದಾವನದ ದರ್ಶನ ಕಷ್ಟಕರವಾಗುತ್ತಿದೆ. ವರದಾ ನದಿಗೆ ತಡೆಗೋಡೆ ನಿರ್ಮಾಣ ಅನಿವಾರ್ಯವಾಗಿದೆ.
ಮುಂಗಾರು ಮಳೆ ಆರಂಭವಾಗಿ ವರದಾ ನದಿ ತುಂಬಿ ಹರಿಯುವ ಸಮಯಕ್ಕೆ ಸರಿಯಾಗಿ ಶ್ರಾವಣ ಮಾಸ ಆರಂಭವಾಗುತ್ತದೆ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಅಲ್ಲದೇ ಧೀರೆಂದ್ರ ತೀರ್ಥರ ಹಾಗೂ ಸುಶಿಲೇಂದ್ರ ತೀರ್ಥರ ಮೂಲ ವೃಂದಾವನಗಳು ಇವೆ. ಇವುಗಳ ದರ್ಶನಕ್ಕೆ ಶ್ರಾವಣ ಮಾಸದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ವರದಾ ನದಿ ತಟದಲ್ಲಿರುವ ರಾಯರಮಠವು ಪ್ರತಿ ವರ್ಷ ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತದೆ. ನದಿ ನೀರು ಮಠದೊಳಗೆ ನುಗ್ಗಿ ಮೂರೂ ವೃಂದಾವನಗಳು ಜಲಾವೃತವಾಗುತ್ತಲೇ ಇವೆ. ಅಲ್ಲದೆ, ಮಠದ ಪಕ್ಕದಲ್ಲಿರುವ ಅನೇಕ ಮನೆಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ಪ್ರವಾಹ ಹೆಚ್ಚಾದರೆ ಸ್ವಾತಂತ್ರ್ಯ ಯೋಧರಾದ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ ಹಾಗೂ ತಿರಕಪ್ಪ ಮಡಿವಾಳ ಅವರು ಬ್ರಿಟಿಷರ
ಗುಂಡೇಟಿಗೆ ಬಲಿಯಾದ ಸ್ಥಳ, ಶ್ರೀ ವೀರಭದ್ರೇಶ್ವರ ದೇವಸ್ಥಾನವೂ ಪ್ರವಾಹಕ್ಕೆ ತುತ್ತಾಗುತ್ತಿದೆ. ನದಿ ಪಕ್ಕದಲ್ಲಿ ಕೆಲ ಮನೆಗಳಿದ್ದು, ನದಿ ಪ್ರವಾಹದಿಂದ ನೀರು ಮನೆಗಳಿಗೂ ನುಗ್ಗವ ಸಾಧ್ಯತೆ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ. ಮಠಕ್ಕೆ ಹೊಂದಿಕೊಂಡ ನೂತನ ಸಭಾಂಗಣದ ಹತ್ತಿರ ನದಿ ನೀರಿನ ತೆರೆಗೆ ಮಣ್ಣು ಕುಸಿದು ಬೀಳುತ್ತಿದ್ದು, ಸಭಾಂಗಣ ಅಪಾಯದ ಅಂಚಿನಲ್ಲಿದೆ. ಒಟ್ಟಾರೆ ವರದಾ ನದಿಯ ಸೇತುವೆ ಬಳಿಯಿಂದ ಮಠದ ಉದ್ಯಾನದ ಅಂತ್ಯದವರೆಗೆ ಪ್ರವಾಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಭದ್ರವಾದ ತಡೆಗೋಡೆ ನಿರ್ವಿುಸಬೇಕು ಎಂಬುದು ಭಕ್ತರ ಒತ್ತಾಯವಾಗಿದೆ.
ಸರ್ಕಾರ ವರದಾ ನದಿ ಪ್ರವಾಹಕ್ಕೆ ತುತ್ತಾಗುವ ರಾಯರ ಮಠ ಹಾಗೂ ಮಠದ ಹತ್ತಿರ ಇರುವ ನೂರಾರು ಮನೆಗಳು ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ತಪ್ಪಿಸಲು ವರದಾ ನದಿಯ ದಕ್ಷಿಣ ಭಾಗದ ತಟದಲ್ಲಿ ತಡೆಗೋಡೆಯನ್ನು ಅಗತ್ಯವಾಗಿ ನಿರ್ವಿುಸಬೇಕಿದೆ. ಸಿದ್ದಲಿಂಗೇಶ ಅಂಕಲಕೋಟಿ ಗ್ರಾಪಂ ಸದಸ್ಯ