

ಪ್ರಶಾಂತ ಭಾಗ್ವತ, ಉಡುಪಿ
ನಗರದ ಅಜ್ಜರಕಾಡಿನಲ್ಲಿರುವ ಉಡುಪಿ ಜಿಲ್ಲಾಸ್ಪತ್ರೆಗೆ ಬರುವಾಗ ಚಟಗಳ ದಾಸರು, ರೋಗಿಗಳು ತುಸು ಎಚ್ಚರಿಕೆಯಲ್ಲಿ ಬರುವುದು ಒಳಿತು. ಏಕೆಂದರೆ, ಗುಟ್ಕಾ-ಬೀಡಾ ಸೇವನೆ, ಧೂಮ್ರಪಾನ (ಬೀಡಿ-ಸಿಗರೇಟ್) ಹಾಗೂ ಮದ್ಯಪಾನ ಮಾಡಿದರೆ ಇಲ್ಲಿ ದಂಡ ತೆರಬೇಕಾಗುತ್ತದೆ..!!
ಜಿಲ್ಲಾಸ್ಪತ್ರೆಯಲ್ಲಿ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಹಾಗೂ ಆರೈಕೆ, ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯೊಳಗೇ ಕದ್ದುಮುಚ್ಚಿ ಚಟ ಮಾಡಿ ಸಿಕ್ಕಿಬಿದ್ದರೆ 200 ರೂ. ದಂಡ ಕಟ್ಟಬೇಕಾಗುತ್ತದೆ.
ಜಿಲ್ಲಾಸ್ಪತ್ರೆಗೆ ಪ್ರತಿದಿನವೂ ಚಿಕಿತ್ಸೆಗಾಗಿ ಸಾವಿರಾರು ಜನರು ಆಗಮಿಸುತ್ತಾರೆ. ನೂರಾರು ಜನರು ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ಅವರಲ್ಲಿ ಅನೇಕರು ಆಸ್ಪತ್ರೆಯಲ್ಲೇ ಗುಟ್ಕಾ-ಬೀಡಾಗಳನ್ನು ತಿಂದು ಆಸ್ಪತ್ರೆಯ ಆವರಣ ಅಥವಾ ಶೌಚಾಲಯದಲ್ಲಿ ಉಗುಳುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿ ಅಸ್ವಚ್ಛತೆಯ ವಾತಾವರಣ ನಿರ್ಮಾಣಗೊಂಡು ಕೆಲವೆಡೆ ಗಬ್ಬೆದ್ದು ನಾರುತ್ತಿತ್ತು. ಹೀಗಾಗಿ ವಾರದಲ್ಲಿ 3 ದಿನಕ್ಕೊಮ್ಮೆ ರೋಗಿಗಳ ಬಳಿ ಗುಟ್ಕಾ-ಬೀಡಾ, ಬೀಡಿ-ಸಿಗರೇಟ್ ಇದೆಯೇ ಎಂದು ತಪಾಸಣೆ ಮಾಡಲಾಗುತ್ತಿದೆ.
ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ ಸಹ ಕೆಲ ರೋಗಿಗಳು ಗುಟ್ಕಾ-ಬೀಡಾ, ಬೀಡಿ-ಸಿಗರೇಟ್ ಚಟ ಮಾಡುತ್ತಾರೆ. ವಾರ್ಡ್ನ ಶೌಚಾಲಯ, ವರಾಂಡದ ಕಿಟಕಿಗಳ ಮೇಲೆ ಹಾಗೂ ತಮ್ಮ ಬ್ಯಾಗ್ಗಳಲ್ಲಿ ಅವುಗಳನ್ನು ಕದ್ದುಮುಚ್ಚಿ ಇಟ್ಟುಕೊಂಡು ಬಳಕೆ ಮಾಡುತ್ತಾರೆ. ಹೀಗಾಗಿ ಜಿಲ್ಲಾಸ್ಪತ್ರೆಯಲ್ಲಿ ಅವುಗಳ ಪತ್ತೆಗಾಗಿ ವೈದ್ಯರನ್ನೊಳಗೊಂಡ ಮಾನಿಟರಿಂಗ್ ಆಫೀಸರ್ ಕಮಿಟಿ ರಚಿಸಲಾಗಿದೆ.
ಆಸ್ಪತ್ರೆಯ ಒಳಗೆ ತಪಾಸಣೆ ಮಾಡುವಾಗ ಕೆಲವೊಮ್ಮೆ ಮದ್ಯದ ಬಾಟಲಿಯೂ ಪತ್ತೆಯಾಗುತ್ತದೆ. ಮಲಗುವ ಬೆಡ್ನ ಕೆಳಭಾಗದಲ್ಲಿ, ಶೌಚಾಲಯದಲ್ಲಿ, ಆಸ್ಪತ್ರೆಯ ಸುತ್ತಮುತ್ತ ಇರುವ ಗಿಡಗಳ ಸಂದಿಯಲ್ಲಿ ಮದ್ಯದ ಬಾಟಲಿ ಇಟ್ಟುಕೊಂಡು ರಾತ್ರಿ ವೇಳೆ ಕುಡಿಯುತ್ತಾರೆ. ರೋಗಿಗಳು ಅಥವಾ ರೋಗಿಗಳನ್ನು ನೋಡಿಕೊಳ್ಳಲು ಬರುವವರು ಈ ಕಾರ್ಯ ಮಾಡುತ್ತಿದ್ದಾರೆ. ಕದ್ದುಮುಚ್ಚಿ ಮದ್ಯ ಕುಡಿಯುವಾಗ ಅಥವಾ ಗುಟ್ಕಾ-ಬೀಡಾ ಸೇವನೆ, ಬೀಡಿ-ಸಿಗರೇಟ್ ಸೇದುವಾಗ ಸಿಕ್ಕಿಬಿದ್ದರೆ ಎನ್ಟಿಸಿಪಿ (ನ್ಯಾಷನಲ್ ಟೊಬ್ಯಾಕೋ ಕಂಟ್ರೋಲ್ ಪ್ರೋಗ್ರಾಮ್) ಕಾಯಿದೆಯ ಅನ್ವಯ 200ರೂ. ದಂಡ ಹಾಕಲಾಗುತ್ತದೆ.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಇದೀಗ ಪೊಲೀಸ್ ಹೊರ ಠಾಣೆಯನ್ನೂ ಆರಂಭಿಸಲಾಗಿದ್ದು, ರೋಗಿಗಳ ಹಾಗೂ ವೈದ್ಯರ ಭದ್ರತೆಗಾಗಿ ಕ್ರಮ ವಹಿಸಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿರುವುದರಿಂದ, ಆಸ್ಪತ್ರೆಯಲ್ಲಿ ಕೆಲ ಸಂದರ್ಭಗಳಲ್ಲಿ ಗಲಾಟೆ ನಡೆಯುವುದರಿಂದ ಹಾಗೂ ಸಾರ್ವಜನಿಕರಿಂದ ಅನಗತ್ಯವಾಗಿ ಆಗುವ ತೊಂದರೆಗಳಿಗೆ ಕಡಿವಾಣ ಹಾಕಲು ಈ ಪೊಲೀಸ್ ಚೌಕಿ ಕೆಲಸ ಮಾಡಲಿದೆ. ಇದಲ್ಲದೆ, ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೊಳಗಾದ, ಮರಣ ಹೊಂದಿದ ರೋಗಿಗಳು ಅಥವಾ ಸಾರ್ವಜನಿಕರು ಜಿಲ್ಲಾಸ್ಪತ್ರೆಗೆ ಬರುವುದರಿಂದ ಎಲ್ಲ ಸೂಕ್ತ ಮಾಹಿತಿ ಸಂಗ್ರಹಿಸಿ, ರವಾನಿಸುವ ಕಾರ್ಯವೂ ಈ ಠಾಣೆಯಿಂದ ಆಗಲಿದೆ.
ಸರ್ಕಾರಿ ವ್ಯವಸ್ಥೆ ಅಂದರೆ ಜನರಿಗೆ ಅದೇನೋ ಅಸಡ್ಡೆ. ಮನೆಯಲ್ಲಿದ್ದಾಗ ಅಸಭ್ಯವಾಗಿ ವರ್ತಿಸದೆ ಆಸ್ಪತ್ರೆಯಲ್ಲಿದ್ದಾಗ ಗುಟ್ಕಾ-ಬೀಡಾ ತಿಂದು ಎಲ್ಲೆಂದರಲ್ಲಿ ಉಗಿಯುತ್ತಾರೆ. ಅದಕ್ಕೆ ಕಡಿವಾಣ ಹಾಕಲು, ಜನರಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಕಾನೂನಿನ ಪ್ರಕಾರವೇ ದಂಡ ಹಾಕುತ್ತಿದ್ದೇವೆ. ಸ್ವಚ್ಛತೆ, ಆರೋಗ್ಯ ರಕ್ಷಣೆಗೆ ಎಲ್ಲರೂ ಸಹಕರಿಸಬೇಕು. | ಡಾ. ಎಚ್.ಅಶೋಕ್. ಜಿಲ್ಲಾ ಸರ್ಜನ್, ಜಿಲ್ಲಾಸ್ಪತ್ರೆ, ಉಡುಪಿ