

ಗುತ್ತಲ: ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಮಾಳವ್ವ ಗೊರವರ ಅವರು 2025-26ನೇ ಸಾಲಿನ 15.32 ಕೋಟಿ ರೂ. ಆಯವ್ಯಯ ಮಂಡಿಸಿದರು.
ಬಜೆಟ್ ವಿಷಯಗಳ ಕುರಿತು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ ವಿವರಿಸಿ, ಈ ಬಾರಿ 3.66 ಲಕ್ಷ ರೂ. ಉಳಿತಾಯ ಆಯವ್ಯಯ ಮಂಡಿಸಲಾಗಿದೆ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಪಟ್ಟಣದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಮತ್ತು ಭೂ ಪರಿವರ್ತನೆಯಾಗದೆ ವಿಭಜನೆ ಮಾಡಿರುವ ಅನಧಿಕೃತ ಸ್ವತ್ತುಗಳಿಗೆ ನಿಗದಿತ ತೆರಿಗೆ ತುಂಬಿಸಿಕೊಂಡು ಬಿ ಖಾತೆ ಮಾಡಲು ಸರ್ಕಾರ ಆದೇಶಿಸಿದೆ. ಈ ಬಗ್ಗೆ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಂಥ ಆಸ್ತಿಗಳನ್ನು ಪಂಚಾಯಿತಿಯಲ್ಲಿ ಬಿ ಖಾತೆ ಮಾಡಿ ಇ-ಸ್ವತ್ತು ಉತಾರ ನೀಡಬೇಕು ಎಂದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣದ ಬಳಿ ಸೇರಿ ವಿವಿಧೆಡೆ ಅನೇಕ ಡಬ್ಬಾ ಅಂಗಡಿಗಳಿವೆ. ಅವುಗಳನ್ನು ತೆರವುಗೊಳಿಸುವಂತೆ ಸದಸ್ಯರು ಒತ್ತಾಯಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನಿಸೋಣ ಎಂದರು.
ಪಟ್ಟಣಕ್ಕೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆ ಮಂಜೂರಾಗಿದ್ದು, 5.5 ಕೋಟಿ ರೂ. ಬಿಡುಗಡೆಯಾಗಿದೆ. ಕಟ್ಟಡ ನಿರ್ಮಾಣಕ್ಕೆ ಸೂಕ್ತ ಭೂಮಿ ಖರೀದಿಸಲಾಗುವುದು. ಶಿವನಗರ ತಾಂಡಾದಲ್ಲಿ 6.20 ಎಕರೆಯಲ್ಲಿ ವಸತಿ ರಹಿತರಿಗೆ ನಿವೇಶನ ನೀಡುವ ಬಗ್ಗೆ ಸರ್ವೇ ನಡೆಯಲಿದೆ. ಅಲ್ಲಿ ಅಂದಾಜು 100ಕ್ಕೂ ಅಧಿಕ ಜನರಿಗೆ ನಿವೇಶನ ನೀಡಲಾಗುವುದು. ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು.
ಹೊಸ ಕಟ್ಟಡಕ್ಕೆ ಪಂಚಾಯಿತಿ ಸ್ಥಳಾಂತರವಾದ ನಂತರ ಪ್ರಸ್ತುತ ಇರುವ ಪಪಂ ಕಟ್ಟಡವನ್ನು ನಾಡಕಚೇರಿಗೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಪಂಚಾಯಿತಿ ಆವರಣದಲ್ಲಿ ರಸ್ತೆಗೆ ಹೊಂದಿಕೊಂಡು ವಾಣಿಜ್ಯ ಮಳಿಗೆಗೆಗಳನ್ನು ನಿರ್ಮಿಸಲು ಠರಾವು ಪಾಸ್ ಮಾಡಲಾಯಿತು.
ಸಭೆಯಲ್ಲಿ ಪಪಂ ಉಪಾಧ್ಯಕ್ಷ ಪರಶುರಾಮ ಯಲಗಚ್ಚ, ಸದಸ್ಯರಾದ ಭರಮಣ್ಣ ಹಾದಿಮನಿ, ಮಾಲತೇಶ ಶೀತಾಳ, ಸಾವಿತ್ರಿ ಘಂಟಿ, ದೀಪಾ ಭರಡಿ, ರೇಖಾ ಲಮಾಣಿ, ಪಾರವ್ವ ಲಮಾಣಿ ಇದ್ದರು.