

ಅಂಕೋಲಾ: ತೃತೀಯ ಲಿಂಗಿಗಳ ರೀತಿ ವೇಷ ತೊಟ್ಟು ಹಣ ಕೀಳುತ್ತಿದ್ದ ಪುರುಷನೊಬ್ಬನನ್ನು ತೃತೀಯ ಲಿಂಗಿಯೊಬ್ಬರು ಹಿಡಿದು ಗೂಸಾ ನೀಡಿದ ಘಟನೆ ಗುರುವಾರ ನಡೆದಿದೆ.
ಸೂರತ್ಕಲ್ ಮೂಲದ ವ್ಯಕ್ತಿ ಎಂದು ಹೇಳಿಕೊಳ್ಳುವ ಈತ, ಕೆಲವು ದಿನಗಳಿಂದ ತೃತೀಯ ಲಿಂಗಿಯಂತೆ ಬಟ್ಟೆ ಧರಿಸಿ ಗಡ್ಡ, ಮೀಸೆ ತೆಗೆಸಿಕೊಂಡು ಜಿಲ್ಲೆಯಾದ್ಯಂತ ಹಣ ಪಡೆಯುತ್ತಿದ್ದ. ತೃತೀಯ ಲಿಂಗಿಗಳು ತೆರಳುವ ಮನ್ನವೇ ಅಂಗಡಿಗೆ ಹೋಗಿ ಹಣ ಪಡೆಯುತ್ತಿದ್ದ.
ಕಳೆದ ವಾರ ಮುರ್ಡೆಶ್ವರದಲ್ಲಿ ಇದೇ ರೀತಿ ಅಂಗಡಿಗೆ ತೆರಳಿ ತೃತೀಯ ಲಿಂಗಿಗಳ ಹೆಸರಿನಲ್ಲಿ ಭೀಕ್ಷೆ ಸಂಗ್ರಹಿಸಿದ್ದ. ಗುರುವಾರ ಪಟ್ಟಣದ ಕಿತ್ತೂರು ರಾಣಿಚನ್ನಮ್ಮ ರಸ್ತೆಯ ಅಂಗಡಿಯಲ್ಲಿ ತೃತೀಯ ಲಿಂಗಿ ಎಂದು ಹೇಳಿಕೊಂಡು ಹಲವರಿಂದ ಹಣ ವಸೂಲಿ ಮಾಡಿದ್ದ. ಈ ನಡುವೆ ತೃತೀಯ ಲಿಂಗಿಗಳ ಪರಿಚಯಸ್ಥ ಬೆಳಂಬಾರ ಗ್ರಾಪಂ ಅಧ್ಯಕ್ಷ ಮಾದೇವ ಗೌಡ ನಕಲಿ ತೃತೀಯ ಲಿಂಗಿಯನ್ನು ಪತ್ತೆ ಮಾಡಿದ್ದಾರೆ. ಇದೇ ವೇಳೆ ಸಿನಿಮಾ ಶೈಲಿಯಲ್ಲಿ ಬೆನ್ನತ್ತಿದ್ದ ನೈಜ ತೃತೀಯ ಲಿಂಗಿಯೊಬ್ಬರು ಪಟ್ಟಣದ ಕ್ರೈಸ್ತ ಮಿತ್ರ ಚರ್ಚ್ ಬಳಿ ಹಿಡಿದು ಥಳಿಸಿದ್ದಾರೆ.
ವೇಷ ಧರಿಸಿದ ವ್ಯಕ್ತಿಯ ಬ್ಯಾಗ್ ಪರಿಶೀಲನೆ ಮಾಡಿದಾಗ ಪುರುಷರ ಬಟ್ಟೆಗಳು ದೊರೆತಿವೆ. ಎಲ್ಲಿಯೂ ಕೆಲಸ ಸಿಗದಿದ್ದಾಗ ಈ ದಂಧೆಗೆ ಇಳಿದಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ನಂತರ ಸಂಘದ ಮುಖ್ಯಸ್ಥೆಗೆ ಕರೆ ಮಾಡಿ ಈ ವಿಷಯ ತಿಳಿಸಿದಾಗ ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.