

ಧಾರವಾಡ: ಸಾಧನಕೇರಿಯ ‘ಗುರುಕೃಪಾ’ ನಿವಾಸದಲ್ಲಿ ಹಮ್ಮಿಕೊಂಡಿದ್ದ ಖ್ಯಾತ ಹಿಂದುಸ್ತಾನಿ ಗಾಯಕ ಪಂ.ಚಂದ್ರಶೇಖರ ಪುರಾಣಿಕಮಠ ಗುರುವರ್ಯರ 15ನೇ ಪುಣ್ಯ ಸ್ಮರಣೆ ಕಾರ್ಯಕ್ರಮವು ಅವರ ಶಿಷ್ಯ ಬಳಗ ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಂಡಿತು.
ಪುರಾಣಿಕಮಠ ಗುರುವರ್ಯರ ಶಿಷ್ಯ, ಹಿಂದುಸ್ತಾನಿ ಗಾಯಕ ಶಿರಸಿಯ ಪಂ.ಶ್ರೀಪಾದ ಹೆಗಡೆ ಸೋಮನಮನೆ ಅವರನ್ನು ಸತ್ಕರಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಶರಣಬಸವ ಚೋಳಿನ ಮಾತನಾಡಿ, ಹಿಂದುಸ್ತಾನಿ ಸಂಗೀತದಲ್ಲಿ ಸತತಾಭ್ಯಾಸ ಹೊಂದಿದ್ದ ಪುರಾಣಿಕಮಠ ಗುರುಗಳು ತಮ್ಮ ಶಿಷ್ಯವೃಂದವನ್ನು ನಿರಂತರವಾಗಿ ಬೆಳೆಸಿದರು. ಅವರ ಇಡಿ ಕುಟುಂಬವೇ ವಿಧೇಯ ಸಂಪನ್ನವಾಗಿದೆ. ಗುರುವರ್ಯರು ಜೀವನವನ್ನೇ ಸಂಗೀತ ಶಾರದೆಗೆ ಅರ್ಪಿಸಿಕೊಂಡಿದ್ದರು ಎಂದರು.
ಅಧ್ಯಕ್ಷೃತೆ ವಹಿಸಿದ್ದ ವಿಶ್ರಾಂತ ಆಕಾಶವಾಣಿ ನಿರ್ದೇಶಕ, ಸಾಹಿತಿ ಡಾ.ಆನಂದ ಪಾಟೀಲ, ಪಂ.ಪುರಾಣಿಕಮಠ ಗುರುಗಳೊಂದಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು.
ನಂತರ ಪಂ.ಶ್ರೀಪಾದ ಹೆಗಡೆ ಸೋಮಮನೆ ಅವರಿಂದ ಗಾಯನ ನಡೆಯಿತು. ತಬಲಾದಲ್ಲಿ ಪಂ.ಅಲ್ಲಮಪ್ರಭು ಕಡಕೋಳ, ಹಾರ್ಮೋನಿಯಂದಲ್ಲಿ ಡಾ. ಪರಶುರಾಮ ಕಟ್ಟಿ ಸಂಗಾವಿ ಮತ್ತು ತಂಬೂರಿಯಲ್ಲಿ ವೀರೇಶ ಸಮರ್ಥ ಸಾಥ್ ನೀಡಿದರು.
ಸ್ಮತಿ ಸಭಾದ ಸ್ಥಾಯಿ ಸಮಿತಿ ಅಧ್ಯಕ್ಷೃ ನರಸಿಂಹ ಪರಾಂಜಪೆ ಸ್ವಾಗತಿಸಿದರು. ಡಾ.ಶಾರದಾ ಭಟ್ಟ ಪರಿಚಯಿಸಿದರು, ಅಶೋಕ ಜೋಶಿ ನಿರೂಪಿಸಿದರು. ನಾಗರತ್ನಾ ಪುರಾಣಿಕಮಠ ವಂದಿಸಿದರು. ಸ್ಮತಿ ಸಭಾದ ಅಧ್ಯಕ್ಷೃ ಕುಮಾರಸ್ವಾಮಿ ಪುರಾಣಿಕಮಠ ವೇದಿಕೆಯಲ್ಲಿದ್ದರು.