ಗುರುವಂದನೆ, ಸಿಂಹಾಸನ ಸಮರ್ಪಣೆ ನಾಳೆ

devanga
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹಂಪಿ ಹೇಮಕೂಟದ ಶ್ರೀ ಗಾಯತ್ರಿಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿಯವರಿಗೆ ಗುರುವಂದನೆ, ಸಿಂಹಾಸನ ಸಮರ್ಪಣೆ ಹಾಗೂ ಅಕ್ಷರಾಭ್ಯಾಸ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು. 21ರಂದು ಆಯೋಜಿಸಲಾಗಿದೆ ಎಂದು ಧಾರವಾಡ ಜಿಲ್ಲಾ ದೇವಾಂಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಬೋರಣ್ಣವರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ದೇವಾಂಗ ಮಹಿಳಾ ಸಂಘ ಹಾಗೂ ಯುವಕ ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆವೇನಹಳ್ಳಿಯಲ್ಲಿ ಪವಿತ್ರವಾದ ಶಿವನಿ ಕಟ್ಟಿಗೆಯಲ್ಲಿ ಸಿಂಹಾಸನವನ್ನು ತಯಾರಿಸಲಾಗಿದೆ. 21ರಂದು ಬೆಳಗ್ಗೆ 6 ಗಂಟೆಗೆ ಹಳೇ ಹುಬ್ಬಳ್ಳಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹೋಮ, ಹವನ, ಪೂಜಾ ಕಾರ್ಯಕ್ರಮಗಳೊಂದಿಗೆ ಶ್ರೀಗಳಿಗೆ ಸಿಂಹಾಸನ ಸಮರ್ಪಿಸಲಾಗುವುದು. ಇದನ್ನು ಬಳಿಕ ಬದಾಮಿಯ ಬನಶಂಕರಿಯಲ್ಲಿರುವ ಶಾಖಾ ಮಠದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.

ಬೆಳಗ್ಗೆ 9.30ಕ್ಕೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಶ್ರೀ ದಯಾನಂದಪುರಿ ಸ್ವಾಮೀಜಿಯವರಿಂದ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಲಾಗುತ್ತದೆ. ಇದಕ್ಕೂ ಮೊದಲು ಶ್ರೀಗಳನ್ನು ದೇಶಪಾಂಡೆನಗರ ರೋಟರಿ ಶಾಲೆಯಿಂದ ಮೆರವಣಿಗೆ ಮೂಲಕ ಕರೆ ತರಲಾಗುವುದು ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ನೃಪತುಂಗ ವಿಶ್ವವಿದ್ಯಾಲಯದ ಉಪಕುಲಪತಿ ಶ್ರೀನಿವಾಸ ಬಳ್ಳಿ, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಪಾಲ್ಗೊಳ್ಳುವರು. ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಜಿ. ಬ್ಯಾಕೋಡಿ ಅಧ್ಯಕ್ಷತೆ ವಹಿಸುವರು. ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟ, ವಿಜಯಪುರ, ಕೊಪ್ಪಳ ಸೇರಿ ವಿವಿಧ ಜಿಲ್ಲೆಗಳಿಂದ ಸಮಾಜದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ನಾಗೇಶ ಭಾಪ್ರಿ, ಯುವ ಸಂಘದ ಅಧ್ಯಕ್ಷ ವಿನೋದ ಜವಳಿ, ಮಹಿಳಾ ಸಂಘದ ಅಧ್ಯಕ್ಷೆ ಮಮತಾ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net