

ನರೇಗಲ್ಲ: ಎಲ್ಲೆಡೆ ಮನಸು ಕೆರಳಿಸುವ ಕಾರ್ಯಗಳೇ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಮನಸು ಅರಳಿಸುವ ಅವಕಾಶಗಳು ವಿರಳವಾಗಿವೆ. ಮನಸು ಅರಳಿಸುವ ಅಪರೂಪದ ಕಾರ್ಯಕ್ರಮವಾಗಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಮುಖ್ಯಶಿಕ್ಷಕ ಮೃತ್ಯುಂಜಯ ಧಡೇಸೂರಮಠ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿಯ ಕೇಂದ್ರ ಶಾಲೆಯ 1986ರಲ್ಲಿ 1ನೇ ತರಗತಿ ಕಲಿತ ಹಾಗೂ 1993ರಲ್ಲಿ 7ನೇ ತರಗತಿ ಪೂರೈಸಿದ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ, ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಸಲ್ಲದು. ಸರ್ಕಾರಿ ಶಾಲೆಯಲ್ಲಿ ಕಲಿತವರು ಉನ್ನತ ಸ್ಥಾನದಲ್ಲಿದ್ದಾರೆ. ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗಳಿಗೂ ಕಡಿಮೆಯಿಲ್ಲ ಎನ್ನುವಂತೆ ಉನ್ನತ ಸಾಧನೆಗಳನ್ನು ಮಾಡುತ್ತಿವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರ್ಕಾರಿ ಶಾಲೆಗಳು ಶ್ರಮಿಸುತ್ತಿವೆ ಎಂದು ತಿಳಿಸಿದರು.
ಧಾರವಾಡ ಶಿಕ್ಷಣ ಆಯುಕ್ತರ ಕಾರ್ಯಾಲಯದ ಉಪ ನಿರ್ದೇಶಕ ಎಸ್.ಬಿ. ಬಿಂಗೇರಿ ಮಾತನಾಡಿ, ಹಲವು ಕೊರತೆಗಳ ನಡುವೆ ವಿದ್ಯಾರ್ಥಿಗಳಿಗೆ ಜೀವನವನ್ನು ಸಮತೋಲನವಾಗಿ ಸ್ವೀಕರಿಸುವ ಶಿಕ್ಷಣವನ್ನು ನೀಡಿದ್ದೇವೆ. ಇದರ ಫಲವಾಗಿಯೇ ನೀವೆಲ್ಲರೂ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದೀರಿ. ಸಮಾಜದಲ್ಲಿ ಯಶಸ್ಸು ಮತ್ತು ಕೀರ್ತಿಯನ್ನು ಸಂಪಾದಿಸಿದ್ದೀರಿ. ನೀವು ತೋರಿದ ಗುರುವಂದನೆ ಸಮಾಜದಲ್ಲಿ ಉಳಿಸಬಹುದಾದ ಕೃತಜ್ಞತಾ ಮೌಲ್ಯವನ್ನು ಜೀವಂತವಾಗಿರಿಸಿದ್ದೀರಿ ಎಂದರು.
ನಿವೃತ್ತ ಶಿಕ್ಷಕ, ಸಿ.ಬಿ. ಹಿರೇಮಠ ಮಾತನಾಡಿ, ಗುರುವಂದನೆ ಗುರು-ಶಿಷ್ಯರು ಪರಸ್ಪರ ಸಿಹಿ-ಕಹಿ ಹಂಚಿಕೊಳ್ಳುವ ಶುಭ ಸಂದರ್ಭ. ನಿಮ್ಮ ಸನ್ಮಾನ ನಮ್ಮ ಆಯುಷ್ಯ, ಆರೋಗ್ಯವನ್ನು ವೃದ್ಧಿಸಿದಂತಾಗಿದೆ. ಗುರುವರ್ಗ ನಿಮಗೆ ಆಭಾರಿಯಾಗಿದೆ ಎಂದರು.
ಎಂ.ಪಿ. ಬಸರಿಗಿಡದ, ಎಸ್.ವಿ. ಕೊತಬಾಳಹಿರೇಮಠ, ಬಿ.ವಿ. ಗೌಡರ, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕೊಣ್ಣವರ, ಡಾ. ಈ.ಕೆ. ಕಾಳೆ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು. ಆನಂದ ಕೋಟಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಬಿ.ಬಿ. ಕುರಿ, ರವಿ ಗೆದಗೇರಿ, ನರೇಶ ಜೋಳದ, ರಾಜೇಂದ್ರ ಪುರೋಹಿತ, ರಮೇಶ ಕಳಕಣ್ಣವರ, ವಿಜಯ ಕೋಕಣಿ, ಗುರುಸಿದ್ಧಗೌಡ ಯಲ್ಲಪ್ಪಗೌಡ್ರ, ಸಂತೋಷ ಯರಂಗಳಿ, ರವಿ ಬಿಷ್ಟಕನವರ, ಡಾ. ಕೃಷ್ಣಾ ಕಾಳೆ, ರಾಜಶೇಖರ ಸೋಮನಗೌಡ್ರ ಸೇರಿ ಹಳೆಯ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಸ್ಥರು ಇದ್ದರು. ಎ.ಸಿ. ಮರಡಿಮಠ, ಕೋಟ್ರೇಶ ಅರವಟಗಿಮಠ ನಿರ್ವಹಿಸಿದರು.
ಸಾರೋಟಿನಲ್ಲಿ ಮೆರವಣಿಗೆ
ಬೆಳಗ್ಗೆ ಶಾಲೆಯಿಂದ ಪ್ರಾರಂಭವಾದ ಪ್ರಭಾತ ಫೇರಿ ಜನಮನ ಸೂರೆಗೊಂಡಿತು. ಸಮವಸ್ತ್ರ ಧರಿಸಿದ್ದ ಹಳೆಯ ವಿದ್ಯಾರ್ಥಿಗಳ ತಂಡವು ಅಕ್ಷರ ಕಲಿಸಿದ ಗುರುಗಳನ್ನು ಸಾರೋಟಿನಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಭಾತ ಫೇರಿ ನಡೆಸಿತು. ಗುರುಗಳನ್ನು ಹೆಗಲ ಮೇಲೆ ಹೊತ್ತುಕೊಂಡು, ಹೂಮಳೆ ಸುರಿಸಿ, ಪಾದಮುಟ್ಟಿ ನಮಸ್ಕರಿಸಿ ವೇದಿಕೆಗೆ ಕರೆದುಕೊಂಡು ಬರಲಾಯಿತು. ತಮ್ಮ ಶಾಲಾ ದಿನಗಳಲ್ಲಿ ಅಡುಗೆ ತಯಾರಿಸುತ್ತಿದ್ದ ಶರಣಮ್ಮ ಕುರಿಯನ್ನು ಸನ್ಮಾನಿಸಿದ ಹಳೆಯ ವಿದ್ಯಾರ್ಥಿಗಳು ಕುರಿಮರಿಯನ್ನು ಕಾಣಿಕೆಯಾಗಿ ನೀಡಿದರು.