

ಗಜೇಂದ್ರಗಡ: ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಆಯೋಜನೆಗಾಗಿ ಮಾಡುವ ಖರ್ಚಿನಲ್ಲಿ ಒಂದು ಭಾಗವನ್ನು ಆ ಶಾಲೆಯ ಪ್ರತಿಭಾವಂತ (ಮೆರಿಟ್) ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಮೀಸಲಿಡಬೇಕು. ಸಹಾಯಯಾಚಿಸಿ ಬಂದವರಿಗೆ, ಆರ್ಥಿಕ ತೊಂದರೆಯಲ್ಲಿ ಓದು ಮುಂದುವರಿಸಲು ಆಗದವರಿಗೆ ಸಹಾಯ ಮಾಡಿದರೆ ಅದು ದೇವರಿಗೆ ಅರ್ಪಿಸಿದಂತೆ ಎಂದು ನಿವೃತ್ತ ಇತಿಹಾಸ ಶಿಕ್ಷಕ ಕೆ.ಎಸ್. ಗಾರವಾಡ ಹಿರೇಮಠ ಹೇಳಿದರು.
ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆಯಲ್ಲಿ 1999- 2000ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊರದೇಶದವರು ಇಂಥ ಕಾರ್ಯಕ್ರಮ ನೋಡಿದರೆ ಖುಷಿ ಪಡುತ್ತಾರೆ. ಯಾವ ವಿದೇಶಿಗರು ಭಾರತ ಮತ್ತು ಭಾರತೀಯರು ಬಡವರು ಎಂದು ಎಂದಿಗೂ ಭಾವಿಸಿಲ್ಲ. ಇಲ್ಲಿನ ಗುರುಪರಂಪರೆ ಅಂಥ ಶಿಷ್ಯರನ್ನು ಬೆಳೆಸಿದೆ ಎಂದರು.
ನಿವೃತ್ತ ಶಿಕ್ಷಕರಾದ ಸಿ.ಎಸ್. ವಾಲಿ ಮಾತನಾಡಿ, ನಾವೆಲ್ಲ ಉತ್ತಮ ಸಂಸ್ಕೃತಿಯ ವಾರಸುದಾರರು. ಮಕ್ಕಳಲ್ಲಿಯೂ ಒಳ್ಳೆಯ ಸಂಸ್ಕೃತಿ ಆಚಾರ, ವಿಚಾರಗಳನ್ನು ಬೆಳೆಸಬೇಕು ಎಂದರು. ಶಿಕ್ಷಕರಾದ ಎ.ಎಸ್. ವಡ್ಡರ ಮಾತನಾಡಿ, ಇದು ಸ್ನೇಹಿತರ ಸಮ್ಮಿಲನ ಅಲ್ಲ, 23 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳ ಸಮ್ಮಿಲನವೂ ಆಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ವಿರೋಧ ಪಕ್ಷದ ನಾಯಕ ಮುರ್ತೂಜಾ ಡಾಲಾಯತ್, ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂಬುದು ಹಲವು ವರ್ಷಗಳ ಕನಸು. ಸ್ನೇಹಿತರ ಸಂಘಟಿತ ಪ್ರಯತ್ನದಿಂದ ಈಗ ನನಸಾಗಿದೆ ಎಂದು ಹೇಳಿದರು.
ಅಗಲಿದ ಹಳೆಯ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಕ್ಷಕರಾದ ಸಿ.ಎಸ್. ವಾಲಿ, ಕೆ.ಎಸ್. ಗಾರವಾಡ ಹಿರೇಮಠ. ಎ.ಎಸ್. ವಡ್ಡರ ವಿ.ಎಸ್. ಕಾಳಗಿ, ವಿ.ಎಸ್. ನವಲಗುಂದ, ಎನ್.ಜಿ. ಶಿವಳ್ಳಿ, ಎಂ.ಬಿ. ಕುಲಕರ್ಣಿ, ಎಸ್.ಎ. ರಂಗಣ್ಣವರ, ಐ.ಎಸ್. ಹಾಸಿಮನವರ, ಕೆ.ಬಿ. ಜಾಗರಿ, ಎಂ.ಎ. ನಾಡಗೇರ, ಎ.ಎಸ್. ಸಿಂಹಾಸನದ, ಆರ್.ಕೆ. ಮಾಳೋದೆ ಹಾಗೂ ಬೋಧಕೇತರ ಸಿಬ್ಬಂದಿಗೆ ಅವರಿಗೆ ಸನ್ಮಾನಿಸಿ, ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು. ಅಜಿತ್ ಎ. ಬಾಗಮಾರ ಇದ್ದರು.
ಅದ್ದೂರಿ ಮೆರವಣಿಗೆ
ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಭೂಮರಡ್ಡಿ ಶಾಲೆ ಆವರಣದಲ್ಲಿ ಸಸಿ ನೆಟ್ಟು ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೈಸೂರು ಮಠ, ಬಸವೇಶ್ವರ ಸರ್ಕಲ್, ದುರ್ಗಾ ಸರ್ಕಲ್, ಅಂಬೇಡ್ಕರ್ ಸರ್ಕಲ್, ಶಿವಾಜಿ ಸರ್ಕಲ್, ಕಾಲಕಾಲೇಶ್ವರ ವೃತ್ತದ ಮಾರ್ಗವಾಗಿ ಮೆರವಣಿಗೆಯು ಕಾರ್ಯಕ್ರಮದ ಮುಖ್ಯವೇದಿಕೆಗೆ ತಲುಪಿತು. ಶ್ವೇತವಸ್ತ್ರಧಾರಿ ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು.