

ವಿಜಯವಾಣಿ ಸುದ್ದಿಜಾಲ ಮಧುರೆ
ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ದಂಡಿಸುತ್ತಿದ್ದೆವು ಆದರೆ, ಈಗ ದಂಡನೆಯೂ ಇಲ್ಲ ಶಿಕ್ಷಣವು ಇಲ್ಲದಂತಾಗಿದೆ ಎಂದು ಶಿಕ್ಷಕ ಕೆ.ವಿ.ಶಿವರಾಮೇಗೌಡ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳನ್ನು ದಂಡಿಸಿದರೆ ಪಾಲಕರು ಬಂದು ನಮ್ಮ ಬಳಿ ಗಲಾಟೆ ಮಾಡುತ್ತಾರೆ, ಮಕ್ಕಳಿಗೆ ಏಕೆ ಹೊಡಿದಿರಿ ಎಂದು ನಮ್ಮ ವಿರುದ್ಧ ದೂರು ಕೊಡುತ್ತಾರೆ.ಇದರಿಂದ ಅನೇಕ ವೇಳೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದರು. ಗದರಿದರೆ ಸಾಕು ಮಕ್ಕಳೇ ಈಗ ದೂರು ನೀಡುತ್ತಾರೆ ಇನ್ನು ಇದಕ್ಕೆ ಅವರ ಪಾಲಕರೇ ಬೆಂಬಲ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಪಾಲಕರು ಬಂದು ಮಕ್ಕಳಿಗೆ ಹೊಡೆದು ಬುದ್ಧಿ ಕಲಿಸಿ ಉತ್ತಮ ಶಿಕ್ಷಣ ನೀಡಿ ಎಂದು ಹೇಳುತ್ತಿದ್ದರು ಆದರೆ ಈಗ ಅದೆಲ್ಲವೂ ವಿರುದ್ಧವಾಗಿದೆ ಶಿಕ್ಷಣದ ನಿಯಮಗಳು ಬದಲಾಗಿದೆ ಎಂದರು.
ನಿವೃತ್ತ ಶಿಕ್ಷಕರೂ ಭಾಗಿ: 2000-2001ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳು 24 ವರ್ಷದ ಬಳಿಕ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ನಡೆಸಿರುವುದು ಖುಷಿಯ ಸಂಗತಿಯಾಗಿದೆ ಎಂದು ಶಾಲಾ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, 80ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ತಮ್ಮ ಶಿಕ್ಷಕರ ಜತೆಗೂಡಿ ತಮ್ಮ ಕಲಿಕೆಯ ದಿನಗಳ ಹಲವು ನೆನಪುಗಳನ್ನು ಹಂಚಿಕೊಳ್ಳಲಾಯಿತು. ಶಿಕ್ಷಕರು ತಮ್ಮ ಮಕ್ಕಳ ಜತೆಗಿನ ಒಡನಾಟ, ಕಲಿಕೆ ಬಗ್ಗೆ ಮಾತನಾಡಿದರು. ದಿನವೀಡಿ ಹಾಡು, ಹರಟೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಿ ಖುಷಿ ಪಟ್ಟರು.
ಶಿಕ್ಷಕರಿಗೆ ಸನ್ಮಾನ: ಗುರುವಂದನಾ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಿದರು.
ಡಿ.ಎಂ.ಕೃಷ್ಣಮೂರ್ತಿ, ಆರ್.ಮಂಜು ರಾಜ್, ಎಚ್.ಸಿ. ಲಿಂಗಣ್ಣಯ್ಯ , ಎಂ.ಮಂಜುನಾಥ್, ಸುರೇಂದ್ರಬಾಬು, ಸವಿತಾ ಜಿ ನಾಯಕ್, ಮುನಿರತ್ನಮ್ಮ, ಜಿ.ಸಿ.ವೀರಕ್ಯಾತಯ್ಯ, ಬಿರಾದರ್ ಸಾಹೇಬ್ ಗೌಡರನ್ನು ಸನ್ಮಾನಿಸಲಾಯಿತು.