

ಬಸವಕಲ್ಯಾಣ: ಅಂತರಂಗ-ಬಹಿರಂಗ ಶುದ್ಧೀಕರಣಗೊಳಿಸಿಕೊಳ್ಳುವ ಪವಿತ್ರ ಪರ್ವ ಕಾಲವೇ ಶ್ರಾವಣ ಮಾಸ. ಕಾಯ-ವಾಚ-ಮನಸಾ ಶುಚಿತ್ವಗೊಂಡು, ಸತ್ಯ ಶುದ್ಧ ಕಾಯಕಧಾರಿಯಾಗಿ ಬದುಕಲು ಶ್ರಾವಣ ಮಾಸ ಅಧ್ಯಾತ್ಮ ನಿಧಿ ಒದಗಿಸುತ್ತದೆ. ಬದುಕಿನ ಫಲವತ್ತತೆ ಹೆಚ್ಚಿಸಿಕೊಂಡು ದೇವ ವೃಕ್ಷದ ಕೃಷಿಯಿಂದ ಸಾತ್ವಿಕ ಫಲ ಪಡೆದುಕೊಳ್ಳಲು ಶ್ರಾವಣ ಮಾಸ ಅಮೃತ ಕಾಲ ಎಂದು ಹಾರಕೂಡನ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಆಲಗೂಡ ಗ್ರಾಮದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ೭೦೪ನೇ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಭಾರತದ ನೆಲ ಉನ್ನತ ಪರಂಪರೆಗಳ ಹಂದರವಾಗಿದ್ದು, ಅದರಲ್ಲಿ ನಾಥ ವಾರಿಕರ್ ಪರಂಪರೆಯೂ ಹೌದು. ನಾಥ ಎಂದರೆ ಒಡೆಯ, ಸರ್ವರ ಒಡೆಯನೇ ಆ ಭಗವಂತ. ನಾಥನಿರುವವರೆಗೆ ಯಾರೂ ಅನಾಥರಲ್ಲ. ಏಕನಿಷ್ಠಯಿಂದ ನಾಥನಲ್ಲಿ ಶ್ರದ್ಧೆ ಭಕ್ತಿಯನ್ನಿಟ್ಟು ಪ್ರಾಪಂಚಿಕ ವಿಷಯವಾಸನೆ ತ್ಯಜಿಸಿ ಪಾರಮಾರ್ಥಿಕದೆಡೆಗೆ ಸಾಗುವವನೇ ಏಕನಾಥ ಎಂದು ಹೇಳಿದರು.
ಆಲಗೂಡ ಪ್ರೌಢಶಾಲೆ ಶಿಕ್ಷಕ ರಮೇಶ ರಾಜೋಳೆ ಪ್ರಾಸ್ತಾವಿಕ ಮಾತನಾಡಿದರು.
ಬಸಯ್ಯಸ್ವಾಮಿ, ಸಿದ್ರಾಮಪ್ಪ ಗುದಗೆ, ವೀರೇಶ ಹೊದಲೂರೆ, ತಾನಾಜಿ ಸೋಮವಂಶಿ, ದತ್ತು ಹುಪ್ಪಳ್ಳೆ, ವಾಮನ ಉಕಾವಲೆ, ರಾಮ ತಳನೆ, ರಾಜಕುಮಾರ ವಾಡಿಕರ್, ದಾದಾರಾವ ಪಾಟೀಲ್, ಶರಣು ಪೆದ್ದೆ, ಶರಣಪ್ಪ ಬಂಗಾರಿ ಇತರರಿದ್ದರು.
ಶ್ರೀಕಾಂತ ಪಾಟೀಲ್ ಸ್ವಾಗತಿಸಿದರು. ಬಸಯ್ಯ ಸ್ವಾಮಿ ವಂದಿಸಿದರು. ಭಕ್ತ ಕುಂಬಾರ ನಿರೂಪಣೆ ಮಾಡಿದರು. ಕರಬಸಯ್ಯ ಸ್ವಾಮಿ ಕೋಹಿನೂರ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಕಾರ್ತಿಕ ಸ್ವಾಮಿ ಯಲದಗುಂಡಿ, ದಿಲೀಪ ದೇಸಾಯಿ, ಶರಣಪ್ಪ ಸುಂಠಾಣ ಹಾಗೂ ಗಾಯಕಿ ಚಂದ್ರಿಕಾ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ವೈಭವದ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.