ಕೂಡಗಿಯಲ್ಲಿ ಗುರುವಂದನೆ ಕಾರ್ಯಕ್ರಮ, ಹಳೆಯ ವಿದ್ಯಾರ್ಥಿಗಳ ಸಮಾಗಮ, ಅಪರೂಪದ ಸ್ನೇಹ ಸಮ್ಮಿಲನ, ಮರೆಯಲಾಗದ ಮಧುರ ನೆನಪುಗಳ ಸಂಗಮ

KUDAGI GURUVANDNE
ಬಸವನಬಾಗೇವಾಡಿ ತಾಲೂಕಿನ ಕೂಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 1996-98ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ವಿ.ಬಿ. ಮುದಕವಿ, ಎ.ಎಸ್. ಕೋಟಿ, ಎಸ್.ಬಿ. ಅಡಹಳ್ಳಿ, ವಿ.ಡಿ. ಸಕ್ರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕಳೆದು ಹೋದ ಬಾಲ್ಯ, ಕಲಿತ ಶಾಲೆ, ಕಲಿಸಿದ ಗುರುಗಳು, ಆಟ-ಪಾಠಗಳಲ್ಲಿ ಒಂದಾಗಿದ್ದ ಸಹಪಾಠಿಗಳ ಸುಮಧುರ ನೆನಪುಗಳು ಯಾರಿಗೆ ಖುಷಿ ತರುವುದಿಲ್ಲ ಹೇಳಿ?

ಬಸವನಬಾಗೇವಾಡಿ ತಾಲೂಕಿನ ಕೂಡಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಭಾನುವಾರ 1996-98ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸಮಾಗಮ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲಕು ಹಾಕುತ್ತಾ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲೊಂದಾಗಿತ್ತು.

ಚದುರಿ ಹೋಗಿದ್ದ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರಿ ಸಂಭ್ರಮ ಹಾಗೂ ಸಡಗರದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಕಂಡ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು. ಕಲಿಸಿದ ಗುರುಗಳಲ್ಲಿ ಸಾರ್ಥಕತೆಯ ಭಾವ ಮನೆ ಮಾಡಿದರೆ ವಿದ್ಯಾರ್ಥಿಗಳ ಕಣ್ಣಲ್ಲಿ ಕೃತಜ್ಞತಾ ಭಾವ ಕಂಗೊಳಿಸಿತು.

ಉದ್ಘಾಟನೆ ನೆರವೇರಿಸಿದ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಗುರುವಿನ ಪಾತ್ರ ದೊಡ್ಡದು. ವಿದ್ಯಾರ್ಥಿ ಜೀವನವೆಂಬುದು ಬೆಲೆ ಕಟ್ಟಲಾಗದ್ದು. ಅದಕ್ಕಾಗಿಯೇ ಅದನ್ನು ಬಂಗಾರದ ಜೀವನ ಎಂದು ಕರೆದಿದ್ದಾರೆ. ಕಲಿತ ಶಾಲೆ ಹಾಗೂ ಕಲಿಸಿದ ಗುರುವಿಗೆ ನಮಿಸುವ ನಿಮ್ಮ ಔದಾರ್ಯ ಮೆಚ್ಚಿಕೊಂಡಿರುವುದಾಗಿ ತಿಳಿಸಿದರು.

ಯರನಾಳ ವಿರಕ್ತ ಮಠದ ಸಂಗನಬಸವ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಭಿನವ ಸಂಗನಬಸವ ಶ್ರೀಗಳು ಜ್ಯೋತಿ ಬೆಳಗಿಸಿದರು. ಗ್ರಾಪಂ ಅಧ್ಯಕ್ಷೆ ಹುಸೇನಬಿ ಕಾ. ಮಾಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಅರುಣ ಬಿ. ನಾಯಕ, ನಿವೃತ್ತ ಉಪನ್ಯಾಸಕರಾದ ವಿ.ಬಿ. ಮುದಕವಿ, ಎ.ಎಸ್. ಕೋಟಿ, ಉಪನ್ಯಾಸಕ ಎಸ್.ಬಿ. ಅಡಹಳ್ಳಿ, ವಿ.ಡಿ. ಸಕ್ರಿ, ಎಂ.ಎಂ. ಭಂಡಾರಿ, ಎಸ್.ಎಸ್. ಓತಗೇರಿ, ಡಿ.ಡಿ. ಬಂಡೇನವರ, ಆರ್.ಎಲ್. ಪಾಟೀಲ, ಎಂ.ವಿ. ಹಿರೇಮಠ, ಎಸ್.ಎಂ. ಗುಡದಿನ್ನಿ, ಎಸ್.ಆರ್. ಗುಗೇನವರ, ಆಶಾ ಚವಾಣ್, ಕೆ.ಜಿ. ನಾಯಕ, ಜಿ.ಬಿ. ಮಂಕಣಿ, ಎಸ್.ಬಿ. ಕೊಲ್ಹಾರ, ಎಸ್.ಎಸ್. ಬೆಳ್ಳುಬ್ಬಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net