

ಬಸವಕಲ್ಯಾಣ: ಮನುಷ್ಯ ಪ್ರತಿ ಹಂತದಲ್ಲೂ ತನ್ನ ಪಾತ್ರವನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದರೆ ಮಾತ್ರ ಸಾರ್ಥಕ್ಯ ಕಾಣಬಹುದಾಗಿದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.
ಹಾರಕೂಡ ಶ್ರೀಮಠದಲ್ಲಿ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ೨೦೧೪-೧೫ರ ವಿದ್ಯಾರ್ಥಿ ಬಳಗ ಆಯೋಜಿಸಿದ್ದ ಗುರುವಂದನೆ, ರಜತ ಕಿರೀಟಧಾರಣೆ ಹಾಗೂ ೭೦೧ನೇ ತುಲಾಭಾರ ಸೇವೆ ಕಾರ್ಯಕ್ರಮಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಮನುಷ್ಯನ ಜನ್ಮವೇ ದೊಡ್ಡ ವಿಸ್ಮಯ, ಅಮೂಲ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಬದುಕಿನ ರಂಗಭೂಮಿಯನ್ನು ಕಲಾತ್ಮಕವಾಗಿ ಮಾಡಿಕೊಳ್ಳಬೇಕು. ಅವರವರ ಬದುಕಿಗೆ ಅವರೇ ರಂಗಕರ್ಮಿ ಎಂದರು.
ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಷ್ಟ್ರೀಯ ಮೌಲ್ಯಗಳ ಧಾರಣೆ ಹೀಗೆ ವಿವಿಧ ರಂಗಗಳಲ್ಲಿ ಕಲಾತ್ಮಕ ಸಾಧನಾಶೀಲ ವ್ಯಕ್ತಿತ್ವ ಹೊಂದಿರುವುದು ಅತ್ಯವಶ್ಯಕವಾಗಿದೆ. ನಮ್ಮ ಪಯಣ ಭವ್ಯತೆಯಿಂದ ಕೂಡಿ ಅನ್ಯರಿಗೆ ದಿವ್ಯತೆಯ ಔತಣ ನೀಡುವಂತಿರಬೇಕು. ವಿದ್ಯೆ, ಬುದ್ಧಿ, ಸಂಸ್ಕಾರ, ಚಾರಿತ್ರ್ಯದ ಅಡಿಪಾಯದ ಮೇಲೆ ಕಟ್ಟಿಕೊಂಡ ಬದುಕಿನ ರಂಗಮಂದಿರ ವೈಭವದಿಂದ ಕೂಡಿರುತ್ತದೆ. ಶಾಶ್ವತ ಮೌಲ್ಯಭರಿತ ಜೀವನ ಕ್ರಮ ನಮ್ಮದಾಗಬೇಕು ಎಂದು ನುಡಿದರು.
ವಸತಿ ಶಾಲೆಯ ೨೦೧೪-೧೫ರ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಕಾರ್ಯಕ್ರಮ ಅವರಲ್ಲಿರುವ ಗುರು ಭಕ್ತಿ, ಧರ್ಮನಿಷ್ಠೆ ಎತ್ತಿ ತೋರಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಸುಖಜೀವನ ಪ್ರಾಪ್ತಿಯಾಗಲಿ ಎಂದು ಹಾರೈಸಿದರು.
ಹಳೆಯ ವಿದ್ಯಾರ್ಥಿಗಳಾದ ಉಮೇಶ ಬರಬಂಡಿ, ಚನ್ನಬಸಪ್ಪ ಮಲಕೂಡ ಮಾತನಾಡಿದರು. ಶಿವಾನಂದ ಪೂಜಾರಿ ತಡಕಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿನಾಥ ಹಿರೇಮಠ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಭೀಮಶಾ ಜೋಜನ, ಕಮಲಾಕರ ಧನ್ನೂರೆ, ಕಾಮರಾಜ ಬಂಡೆ, ಜ್ಯೋತಿ ಕೆರಗೋಟೆ, ಮಂಜುಳಾ ಹರಕೆ, ಭಾಗ್ಯಶ್ರೀ ಚೌಧರಿ, ಲಲಿತಾ ಬೊಂಬಲೆ, ಅಂಜನಾ ಜಮಾದಾರ, ದಾನಮ್ಮ ಜೋಜನ ಇತರರಿದ್ದರು. ಗುರು ಉಗಾಜಿ ಭಿನ್ನವತ್ತಳೆ ವಾಚನ ಮಾಡಿದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು. ಅನುಪ ಬಡಾ ವಂದಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆಗೀತೆ ನಡೆಸಿಕೊಟ್ಟರು.