

ಹುಬ್ಬಳ್ಳಿ: ಸುಭದ್ರವಾದ ದೇಶ ಕಟ್ಟಲು ಒಳ್ಳೆಯ ಶಿಕ್ಷಕರಿಗೆ ಮಾತ್ರ ಸಾಧ್ಯ. ನಿಜವಾದ ಶಿಕ್ಷಣ ಎಂದರೆ ಒಬ್ಬ ವ್ಯಕ್ತಿಯ ಮನಸ್ಸಿನ ಒಳಗಿನ ಬೆಳಕನ್ನು ಹೊರಜಗತ್ತಿಗೆ ಪರಿಚಯಿಸುವುದೇ ಆಗಿದೆ. ಭಾರತ ದೇಶಕ್ಕೆ ಧರ್ಮವೇ ಶಕ್ತಿ, ಯುವಪೀಳಿಗೆಗೆ ಧರ್ಮ, ಸಂಪ್ರದಾಯಗಳನ್ನು ತಿಳಿಸಿ ಪ್ರಜ್ಞಾವಂತರನ್ನಾಗಿಸುವ ಮಹತ್ವದ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಶ್ರೀ ಜಗದ್ಗುರು ಫಕೀರ ಶಿವಜೋಗೀಶ್ವರ ಪ್ರೌಢಶಾಲೆಯಲ್ಲಿ 1996- 1997ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಎಂ. ದೇವಗಿರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತು ಬದಲಾಗಿದೆ ಎಂಬುದೆಲ್ಲ ಸುಳ್ಳು. ನಮ್ಮ ಭಾವನೆಗೆ ತಕ್ಕಂತೆ ಒಳ್ಳೆಯದಾಗುತ್ತದೆ. 28 ವರ್ಷಗಳ ನಂತರ ಕಲಿಸಿದ ಶಿಕರನ್ನು ನೆನಪಿಸಿಕೊಂಡು ಗೌರವಿಸುತ್ತಿರುವುದು ಎಲ್ಲರ ಒಳ್ಳೆಯ ಗುಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನಿವೃತ್ತ ಕನ್ನಡ ಶಿಕ್ಷಕ ಬಿ.ಆರ್. ಕಳ್ಳಿಮನಿ. ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೇ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ ಎಂದು ತಿಳಿಸಿದರು.
ನಿವೃತ ಹಿಂದಿ ಶಿಕ್ಷಕ ವಿ.ಎಂ. ಕರ್ಜಗಿ, ಹಳೇ ವಿದ್ಯಾರ್ಥಿಗಳು ಈ ಹಿಂದೆ ನೆರೆಹಾವಳಿ ಸಂತ್ರಸ್ತರಿಗೆ 14000 ರೊಟ್ಟಿ ಮತ್ತು ಕ್ವಿಂಟಾಲ್ ಶೇಂಗಾ ಚಟ್ನಿ ಮುಂತಾದ ಸಾಮಗ್ರಿಗಳನ್ನು ನೀಡಿದ್ದು, ಶಾಲೆ ಮಕ್ಕಳಿಗೆ ಪುಸ್ತಕ ಪೆನ್ ವಿತರಣೆ ಮಾಡಿರುವುದು ಮಾದರಿ ಕಾರ್ಯ ಎಂದರು.
ನಿವೃತ ವಿಜ್ಞಾನ ಶಿಕ್ಷಕ ಎನ್.ಎಂ. ಮಳೇಪ್ಪನವರ, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಎಚ್.ಎನ್. ಆನವೇರಿ, ನಿವೃತ ಸಮಾಜ ವಿಜ್ಞಾನ ಶಿಕ್ಷಕ ಎಚ್.ಎಸ್. ಬೊಮ್ಮನಗೌಡ್ರ, ಎಚ್.ಎನ್. ಕಳ್ಳಿಹಾಳ,
ಎಸ್.ಬಿ. ತಾಳಿಕೋಟಿಮಠ ಇತರರು ಮಾತನಾಡಿದರು.
ಗುರುವೃಂದದವರಿಗೆ ಗೌರವ ಸನ್ಮಾನ ಮಾಡಲಾಯಿತು. ಶೇಖಪ್ಪ ಶಿರಹಟ್ಟಿ, ಮಂಜುನಾಥ ಈರಗಾರ, ಹೇಮನಗೌಡ ಮರಿಗೌಡ್ರ, ಅಬ್ದುಲ್ ಮುನಾ್ ಕೊಲಕಾರ ಹಾಗೂ ನೃತ್ಯ ಕಲಾವಿದರಾದ ಕೃಷ್ಣಮೂರ್ತಿ, ಪಲ್ಲವಿ ಅವರಿಗೆ ಗೌರವಿಸಲಾಯಿತು.
ಮುಖ್ಯಾಧ್ಯಾಪಕ ಡಿ.ಸಿ. ಬೊಮ್ಮನಗೌಡ್ರ ಪ್ರಾಸ್ತಾವಿಕ ಮಾತನಾಡಿದರು. 200ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡರು. ಅನೇಕರು ಅನಿಸಿಕೆಗಳನ್ನು ಹಂಚಿಕೊಂಡರು.