

ನರೇಗಲ್ಲ: ಜಗತ್ತಿಗೆ ಬೆಳಕು ನೀಡುವವರು ಇಬ್ಬರು. ಒಬ್ಬನು ಸೂರ್ಯನಾದರೆ, ಮತ್ತೊಬ್ಬರು ಶಿಕ್ಷಣ ನೀಡುವ ಗುರು. ಗುರುವಿಲ್ಲದೆ ಯಾವುದೇ ವಿದ್ಯೆ ಪೂರ್ಣವಾಗದು. ವಿದ್ಯೆ, ಜ್ಞಾನ ಜಗತ್ತಿನ ಎರಡು ದೊಡ್ಡ ರತ್ನಗಳು. ಇದನ್ನು ಪಡೆಯಲು ಗುರುವಿಗೆ ಶರಣು ಹೋಗಲೇಬೇಕು ಎಂದು ಹಾಲಕೆರೆಯ ಜ. ಮುಪ್ಪಿನ ಬಸವಲಿಂಗ ಸ್ವಾಮೀಜಿಗಳು ನುಡಿದರು.
ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ 1972- 73ನೇ ಸಾಲಿನ ವಿದ್ಯಾರ್ಥಿಗಳು ನೀಡಿದ ಗುರುವಂದನೆ- ಅಭಿನಂದನೆ, ಪ್ರತಿಭಾ ಪುರಸ್ಕಾರ ಮತ್ತು ಪುನರ್ಮಿಲನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
50 ವರ್ಷದ ನಂತರ ಶಾಲೆ, ಕಲಿಸಿದ ಗುರುಗಳನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿದ್ದು ಇತರರಿಗೆ ಮಾದರಿಯಾಗಿದೆ. ನೀವು ಸಂಸ್ಥೆಗೆ ಎಷ್ಟೇ ದುಡ್ಡು ಕೊಟ್ಟಿದ್ದರೂ ಸಂತೃಪ್ತಿಯಾಗುತ್ತಿದ್ದಿಲ್ಲ. ಬದಲಾಗಿ ನಿಮಗೆ ಕಲಿಸಿದ ಗುರುಗಳಿಗೆ ಗುರವಂದನೆ ಸಲ್ಲಿಸಿದ್ದೀರಲ್ಲ ಅದಕ್ಕಾಗಿ ನಿಮಗೆಲ್ಲರಿಗೂ ಶ್ರೀ ಅನ್ನದಾನೇಶ್ವರನ ವಿಶೇಷ ಆಶೀರ್ವಾದ ಖಂಡಿತ ದೊರೆಯುತ್ತದೆ ಎಂದರು.
ಸಂಸ್ಥೆಯ ನಿಜವಾದ ಸಂಪತ್ತು ಕಟ್ಟಡಗಳಲ್ಲ. ವಿದ್ಯಾ ಸಂಪನ್ನರು, ಸಂಸ್ಕೃತಿ ಸಂಪನ್ನರಾದ ಮಕ್ಕಳೇ ವಿದ್ಯಾ ಸಂಸ್ಥೆಗಳ ನಿಜವಾದ ಸಂಪತ್ತು ಎಂದು ನಮ್ಮ ಗುರುಗಳಾಗಿದ್ದ ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮೀಜಿ ಪದೇಪದೆ ಹೇಳುತ್ತಿದ್ದರು. ಈ ಸಡಗರ, ಸುವರ್ಣ ಸಂಭ್ರಮ ನೋಡಿದರೆ ಆ ಮಾತು ನಿಜ ಎನಿಸುತ್ತದೆ ಎಂದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಸಮಾರಂಭವನ್ನು ಉದ್ಘಾಟಿಸಿದರು. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಿವೃತ್ತ ಶಿಕ್ಷಕರಾದ ಎ. ಎಫ್. ಹಿರೇಮಠ, ಎಂ. ಎ. ಹಿರೇವಡೆಯರ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕ ಆರ್.ಎಲ್. ಪೊಲೀಸ್‌ಪಾಟೀಲ, ಡಾ.ವಿ. ಬಿ. ರಡ್ಡೇರ, ಆಡಳಿತಾಧಿಕಾರಿ ಎನ್. ಆರ್. ಗೌಡರ, ವೀರಣ್ಣ ಹಳ್ಳಿ, ಸೋಮಣ್ಣ ಹರ್ಲಾಪುರ, ಬಸವರಾಜ ದಿಂಡೂರ, ಇತರರಿದ್ದರು. ಅಶೋಕ ಕುಲಕರ್ಣಿ ಸ್ವಾಗತಿಸಿ, ಎಫ್.ಎನ್. ಹುಡೇದ ನಿರ್ವಹಿಸಿದರು.