

ಸೋಮವಾರಪೇಟೆ: ಗುರುಪೂರ್ಣಿಮೆ ಹಾಗು ಜನ್ಮ ವರ್ಧಂತಿ ಅಂಗವಾಗಿ ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಬುಧವಾರ ಸಿದ್ಧಗಂಗಾ ಮಠಾಧೀಶರಾದ ಸಿದ್ದಲಿಂಗ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು.
ಜಿಲ್ಲೆ ವಿವಿಧ ಮಠಾಧೀಶರು, ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ ಪದಾಧಿಕಾರಿಗಳು ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಸಿದ್ದಲಿಂಗ ಶ್ರೀಗಳಿಗೆ ಕೊಡಗಿನ ಕಾಫಿಪುಡಿ, ಕಾಳುಮೆಣಸು, ಜೇನು ನೀಡಿ ಶುಭ ಕೋರುವುದರೊಂದಿಗೆ ಆಶೀರ್ವಾದ ಪಡೆದರು.
ಕೊಡಗಿನಲ್ಲಿ ಮಳೆ, ಬೆಳೆಯ ಬಗ್ಗೆ ಮಾಹಿತಿ ಪಡೆದ ಶ್ರೀಗಳು, ಬೆಳೆಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರ ಸಂಕಷ್ಟವನ್ನು ದೂರ ಮಾಡಲೆಂದು ಹರಸಿದರು ಎಂದು ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸೋಮವಾರಪೇಟೆ ಮಹೇಶ್ ವಿಜಯವಾಣಿಗೆ ತಿಳಿಸಿದರು.
ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸೋಮವಾರಪೇಟೆ ತಾಲೂಕಿನ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ವೇದಿಕೆಯ ಡಿ.ಬಿ.ಸೋಮಪ್ಪ, ಬಸಪ್ಪ, ಪ್ರದೀಪ್, ಚಂದ್ರಶೇಖರ್, ಗೀತಾರಾಜು, ಮಂಜುಳಾ, ರಜನಿ, ದೀಪಾ ಇದ್ದರು.