ಗುರುಗಳನ್ನು ಅಭಿನಂದಿಸುವ ಕೆಲಸ ಶ್ಲಾಘನೀಯ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯಾ ಮೆಚ್ಚುಗೆ

Guruvandana programme Mandya
Published on

ಮಂಡ್ಯ: ತಮಗೆ ವಿದ್ಯೆ ಕಲಿಸಿದ ಗುರುಗಳಿಗೆ ಅಭಿನಂದನೆ ಮೂಲಕ ಗೌರವ ಸಲ್ಲಿಸುವ ಕೆಲಸ ಶ್ಲಾಘನೀಯ ಎಂದು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕಿನ ಕೆ.ಗೌಡಗೆರೆ ಗ್ರಾಮದ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಬಳಗ ಆಯೋಜಿಸಿದ್ದ 1995ನೇ ಸಾಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಮತ್ತು ಯಾಂತ್ರಿಕ ಜನಜೀವನದ ಒತ್ತಡದಲ್ಲಿಯೂ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿ ತಮ್ಮ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ದಿನ ಗೌರವ ಸಮರ್ಪಿಸಿ ಧನ್ಯತಾಭಾವ ಮೆರೆಯುತ್ತಿರುವುದು ಮಾದರಿಯಾಗಿದೆ. ಇಂತಹ ಸೌಭಾಗ್ಯ ಎಲ್ಲ ಶಿಕ್ಷಕರಿಗೂ ಲಭ್ಯವಾಗಲಿ. ಶಾಲೆಯಲ್ಲಿ ಓದಿದ ಮಕ್ಕಳು 30 ವರ್ಷದ ಬಳಿಕ ಮತ್ತೆ ಒಗ್ಗೂಡಿ ಸ್ನೇಹ ಸಮ್ಮಿಲನದಂತಹ ಅದ್ಬುತ ಕಾರ್ಯಕ್ರಮ ಆಯೋಜಿಸಿ ಸ್ನೇಹ, ಆತ್ಮೀಯತೆ ಗಟ್ಟಿಗೊಳಿಸಿಕೊಳ್ಳುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಎಲ್.ಸ್ವಾಮಿ, ನಿವೃತ್ತ ಶಿಕ್ಷಕರಾದ ಕೆ.ಎಂ.ಮಹದೇವಸ್ವಾಮಿ, ಕೆ.ಮೂರ್ತಿ, ಕೆ.ಎಸ್.ಜವರೇಗೌಡ, ಎಚ್.ಆರ್.ನಾರಾಯಣಮೂರ್ತಿ, ಬಿ.ರಾಮಣ್ಣ, ಮುಖ್ಯ ಶಿಕ್ಷಕ ಟಿ.ವಿ.ಜಯಚಂದ್ರ, ನಿವೃತ್ತ ಸಿಬ್ಬಂದಿ ಸಿದ್ದರಾಜು, ನಾಗರಾಜು, ಆರ್.ವಿಠ್ಠಲಮೂರ್ತಿ, ನರಸಮ್ಮ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಿಂದ ಶಾಲೆವರೆಗೂ ಶಿಕ್ಷಕರನ್ನು ಅದ್ಧೂರಿ ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ತರಗತಿ ಕೊಠಡಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ಮಾಡಿದ ದೃಶ್ಯವನ್ನು ಮರುಸೃಷ್ಟಿಸಲಾಯಿತು. ಅಗಲಿದ ಶಿಕ್ಷಕರು ಹಾಗೂ ಸಹಪಾಠಿಗಳಿಗೆ ಸಂತಾಪ ಸೂಚಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net