ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಕ್ಷಕರು: ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಅಭಿಮತ

1 (5)
Published on

ಮಂಡ್ಯ: ವಿದ್ಯಾರ್ಥಿಗಳಿಗೆ ಪಾಲಕರು ಜನ್ಮ ನೀಡಿದರೆ ಶಾಲಾ ಶಿಕ್ಷಕರು ಜೀವನ ರೂಪಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.

ತಾಲೂಕಿನ ತಿಮ್ಮನಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ವೇದಿಕೆ ಆಯೋಜಿಸಿದ್ದ ಗುರುವಂದನೆ ಮತ್ತು ಭಾವ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನ್ಮ ಎಷ್ಟು ಮುಖ್ಯವೋ, ಜೀವನವೂ ಅಷ್ಟೇ ಮುಖ್ಯ. ಜೀವನದಲ್ಲಿ ಸುಖವಾಗಿ ಬಾಳಬೇಕು ಎಂದರೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಅದರಂತೆ ಶಿಕ್ಷಕರನ್ನು ಗುರುವಂದನಾ ಮೂಲಕ ಅಭಿನಂದಿಸಿ ಧನ್ಯತಾ ಭಾವ ಪಡೆಯುತ್ತಿದ್ದೀರಿ ಎಂದು ನುಡಿದರು.

ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ಟಿ.ಸಿ.ತಿಮ್ಮೇಗೌಡ ಮಾತನಾಡಿ, ತಾಲೂಕಿನ ಗಡಿಭಾಗದ ಗ್ರಾಮ ತಿಮ್ಮನಹೊಸೂರಿನಲ್ಲಿ 1991ರಲ್ಲಿ ಪ್ರೌಢಶಾಲೆ ಆರಂಭಗೊಂಡಿತು. 7 ಗ್ರಾಮಗಳ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿ ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತಾರೆ. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಾರೆ. ಈವರೆಗೆ ಸುಮಾರು 1,300 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಇಲ್ಲಿ ಶಿಕ್ಷಣ ಪಡೆದವರು ಈಗ ವಕೀಲರು, ಇಂಜಿನಿಯರ್, ವೈದ್ಯರು, ಉದ್ಯಮಿಗಳು, ಶಿಕ್ಷಕರಾಗಿರುವುದು ಹೆಮ್ಮೆ ತರುತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಬಿಆರ್‌ಸಿ ನಾಗರಾಜು, ಮುಖ್ಯಶಿಕ್ಷಕ ಯೋಗೇಶ್, ವಿಷಯ ಪರಿವೀಕ್ಷಕರಾದ ನಂಜರಾಜು, ಪುಟ್ಟರಾಜಯ್ಯ, ಉಮೇಶ್, ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ಚಲುವರಾಜ್, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ನಿರ್ದೇಶಕ ಎಂ.ಟಿ.ನಾಗರಾಜು, ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ವಕೀಲ ಸುರೇಶ್, ನಿರ್ದೇಶಕರಾದ ಚಿಕ್ಕಸ್ವಾಮಿ, ಡಯಟ್ ಉಪನ್ಯಾನಕ ಸಬ್ಬನಹಳ್ಳಿ ಸಿದ್ದರಾಜು, ಮಂಚಲಿಂಗೇಗೌಡ, ಚೈತನ್ಯ, ಸತೀಶ್, ಕುಮಾರ್, ಗ್ರಾಪಂ ಸದಸ್ಯ ಆನಂದ್ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಗಣ್ಯರನ್ನು ಜಾನಪದ ಕಲಾತಂಡದೊಂದಿಗೆ ಅಲಂಕೃತ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ವೇದಿಕೆ ಕರೆದುಕೊಂಡು ಬರಲಾಯಿತು. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿರುವ ಮತ್ತು ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net