

ವಿಜಯವಾಣಿ ಸುದ್ದಿಜಾಲ ಉಡುಪಿ
ಭಕ್ತಿ ಮಾರ್ಗದಿಂದ ಜೀವನದಲ್ಲಿ ಯಶ ಕಾಣಲು ಸಾಧ್ಯ. ಭಕ್ತಿಯಿಂದ ಏನನ್ನಾದರೂ ಗಳಿಸಬಹುದು. ಆದರೆ, ಭಕ್ತಿಯೇ ಇಲ್ಲದವರ ಜೀವನ ವ್ಯರ್ಥ. ಕೌಟುಂಬಿಕ ಸಮಸ್ಯೆ, ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಸಮಸ್ಯೆಗಳಿಗೂ ಗೀತೆಯೆಂಬ ಭಕ್ತಿಯೇ ಪರಿಹಾರವಾಗಿದೆ. ಕೃಷ್ಣನನ್ನು ನಂಬಿದರೆ ಸಂಕಷ್ಟವೇ ಬರದು ಎಂದು ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ದಾಸಸಾಹಿತ್ಯ ಪ್ರಾಜೆಕ್ಟ್ ತಿರುಮಲ ತಿರುಪತಿ ದೇವಸ್ಥಾನಮ್ ಸಹಭಾಗಿತ್ವದಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದರು.
ಗುರುಪೂರ್ಣಿಮೆಯ ಈ ಶುಭದಿನದಂದು ಭಗವದ್ಗೀತೆಯಲ್ಲಿರುವ ಭಕ್ತಿ ಸಂದೇಶ ತಿಳಿದುಕೊಳ್ಳಬೇಕು. ಅದನ್ನು ಅಭ್ಯಾಸ ಮಾಡಿದರೆ, ಆರಾಧಿಸಿದರೆ ಶ್ರೀಕೃಷ್ಣ ಸಂಪೂರ್ಣ ಅನುಗ್ರಹ ಲಭಿಸುತ್ತದೆ. ಭಗವದ್ಗೀತೆಯು ಮಾನವನ ಜೀವನದ ಮಾರ್ಗದರ್ಶಕವಾಗಿದೆ. ಹೀಗಾಗಿ ಗೀತೆಯ ಭಕ್ತಿ ಅನುಸರಿಸಿದರೆ ಜೀವನಪೂರ್ತಿ ಸಂತಸದಿಂದ ಇರಲು ಸಾಧ್ಯ. ಅನನ್ಯತೆಯ ಭಕ್ತಿ ಹಾಗೂ ನಿತ್ಯವೂ ಪೂಜೆ ಮಾಡುವವರ ಯೋಗಕ್ಷೇಮ ನೋಡಿಕೊಳ್ಳುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ತಿಳಿಸಿದ್ದಾನೆ ಎಂದರು.
ತಿರುಪತಿ ದೇವಸ್ಥಾನಮ್ನ ಮುಖ್ಯ ಅಧಿಕಾರಿ ರಾಜಗೋಪಾಲ್, ಟಿಟಿಡಿಯ ದಾಸ ಸಾಹಿತ್ಯ ಪ್ರಾಜೆಕ್ಟ್ನ ಮುಖ್ಯ ಸಂಚಾಲಕ ವಿದ್ವಾನ್ ಆನಂದ ತೀರ್ಥಾಚಾರ್ ಪಗಡಾಲ್ ನೇತೃತ್ವದಲ್ಲಿ ಸಮಸ್ತ ಆಂಧ್ರ ಹಾಗೂ ಕರ್ನಾಟಕದ ತಿರುಪತಿ ತಿರುಮಲದ ಭಜನಾ ತಂಡದ ಪರವಾಗಿ ಸುಗುಣೇಂದ್ರ ಶ್ರೀ ಹಾಗೂ ಕಿರಿಯ ಸ್ವಾಮೀಜಿ ಸುಶ್ರೀಂದ್ರ ಶ್ರೀಗಳಿಗೆ ಪುಷ್ಪವೃಷ್ಟಿ ಮೂಲಕ ಗುರುಕಾಣಿಕೆಯಿತ್ತು, ಶೇಷವಸ್ತ್ರ ಸಮೇತ ಶ್ರೀನಿವಾಸನ ಪ್ರಸಾದ ನೀಡಿ ಗುರುವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ವೇದಘೋಷ ಹೇಳಿದರು.
ಶ್ರೀಮಠದ ದಿವಾನ ನಾಗಾರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ, ಮಠದ ಸಾಂಸ್ಕೃತಿಕ ಕಾರ್ಯಕಮಗಳ ಉಸ್ತುವಾರಿ ರಮೇಶ್ ಭಟ್, ಡಾ. ಬ.ಗೋಪಾಲ ಆಚಾರ್ಯ, ಟಿಟಿಡಿಯ ಅರ್ಚಕರು, ಭಜನಾ ತಂಡದ ಪ್ರಮುಖರು, ವಿವಿಧ ವಿದ್ವಾಂಸರು ಗಣ್ಯರು ಉಪಸ್ಥಿತರಿದ್ದರು. ವಿವಿಧ ಭಜನಾ ತಂಡದ 3 ಸಾವಿರಕ್ಕೂ ಅಧಿಕ ಸದಸ್ಯರ ಕೋಲಾಟ, ನೃತ್ಯ, ಭಜನೆಗಳಿಂದ ರಾಜಾಂಗಣ ಭಕ್ತಿಲೋಕವಾಗಿ ಕಂಗೊಳಿಸಿತು.
ಉಡುಪಿ ಇಂದು ನಂದಗೋಕುಲದಂತಾಗಿದೆ. ಸಾವಿರಾರು ಹಿರಿ-ಕಿರಿಯ ಗೋಪಿಕೆಯರು ನೃತ್ಯ, ಭಜನೆ, ಕುಣಿತದ ಮೂಲಕ ಕೃಷ್ಣನನ್ನು ಆರಾಧಿಸಿದ್ದಾರೆ. ಆತನಿಗಿರುವ 16 ಸಾವಿರ ಪತ್ನಿಯರು ಇಂದು ಉಡುಪಿಗೆ ಬಂದು ಆತನನ್ನು ಆರಾಧಿಸಿದಂತಹ ಸನ್ನಿವೇಶವನ್ನು ಇಲ್ಲಿ ಸೇರಿರುವ ಸಾವಿರಾರು ಮಹಿಳಾ ಭಕ್ತರು ಸೃಷ್ಟಿಸಿದ್ದಾರೆ. ಹೀಗಾಗಿ ಇದು ಗುರುಪೂರ್ಣಿಮೆಯಷ್ಟೇ ಅಲ್ಲ, ಲಕ್ಷ್ಮೀ ಪೂರ್ಣಿಮೆಯೂ ಆಗಿದೆ. ಮಹಿಳೆಯರೆಂದರೆ ಭಕ್ತಿಯ ಪ್ರತಿನಿಧಿಗಳು. ಅವರನ್ನು ಭಕ್ತಿ ಮಾತಾ ಎನ್ನುತ್ತಾರೆ. ಜೀವನದ ಗುರಿಯೇ ಭಕ್ತಿಯಾಗಿರಬೇಕು ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.
ಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಂಡ ಭಕ್ತರಿಗೆ ಶ್ರೀಗಳು ದೀಕ್ಷೆ ನೀಡಿ ಮಾತನಾಡಿ, ಕೋಟಿ ಗೀತಾ ಲೇಖನ ಯಜ್ಞಕ್ಕೆ ತಿರುಪತಿ ವೆಂಕಟೇಶನ ಸನ್ನಧಿಯಿಂದ 50 ಲಕ್ಷ ರೂ. ಕೊಡುಗೆ ಬಂದಿದೆ. 30 ವರ್ಷದ ಹಿಂದೆ ಗೀತಾ ಮಂದಿರ ನಿರ್ಮಿಸುವಾಗಲೂ 50 ಲಕ್ಷ ರೂ. ಕೊಡುಗೆ ಬಂದಿತ್ತು. ಹೀಗಾಗಿ ಯಾರು ಗೀತಾ ಲೇಖನ ಯಜ್ಞದಲ್ಲಿ ಪಾಲ್ಗೊಳ್ಳುತ್ತಾರೋ ಅವರಿಗೆ ಉಡುಪಿ ಶ್ರೀಕೃಷ್ಣ ಹಾಗೂ ತಿರುಪತಿ ಶ್ರೀನಿವಾಸ ಇಬ್ಬರದೂ ಆಶೀರ್ವಾದ ಲಭಿಸುತ್ತದೆ ಎಂದರು.
ಶ್ರೀಕೃಷ್ಣನ ಸನ್ನಿಧಿಯಲ್ಲಿ ಗುರುವಂದನೆ ಆಯೋಜಿಸಿರುವುದು ಅರ್ಥಪೂರ್ಣ. ಭಗವಂತನಿಗೆ ನಾವು ಸಮಾನರಾಗಲು ಅಸಾಧ್ಯ. ನಾವೆಲ್ಲರೂ ಭಗವಂತನ ದಾಸರು. ಆತ ಸವೋರ್ತ್ತಮ. ಸಂಸಾರ, ಮೋಕ್ಷದಲ್ಲಿಯೂ ಸಹ ನಾವು ಭಗವಂತನ ದಾಸರೇ ಆಗಿರುತ್ತೇವೆ. ಅಂತರ್ಯಾಮಿಯಾದ, ಜಗದ್ಗುರುವಾದ ಶ್ರೀಕೃಷ್ಣನ ಅನುಗ್ರಹ ಆತನ ಸಕಲ ದಾಸರಿಗೆ ಲಭಿಸಿಲಿ. ಸುಶ್ರೀಂದ ತೀರ್ಥ ಶ್ರೀಪಾದರು. ಪುತ್ತಿಗೆ ಕಿರಿಯ ಶ್ರೀಗಳು