ದುಡಿಮೆಯೇ ಭಗವಂತನ ಪೂಜೆ

Oplus_131072
ಹಾರಕೂಡ ಶ್ರೀಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಗುರುವಂದನೆ, ಹಾರಕೂಡ ಶ್ರೀಗಳ ೭೨೪ನೇ ತುಲಾಭಾರ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಬಿ.ಕೆ.ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಭೀಮಶಾ ಜೋಜನ, ಅಪ್ಪಣ್ಣ ಜನವಾಡ, ಡಾ.ರಾಜಶೇಖರ ಮದರಿ, ವಿಜಯಕುಮಾರ ನಾಗವಾರ, ಗುರುಲಿಂಗಪ್ಪ ದೇಗಾಂವ ಇತರರಿದ್ದರು.
Published on

ಬಸವಕಲ್ಯಾಣ: ದುಡಿಮೆಯೇ ಒಂದು ಆರಾಧನೆಯಾಗಿದ್ದು, ಬದುಕಿನ ಶ್ರೇಯಸಿಗೆ ಮೂಲಾಧಾರವಾಗಿದೆ. ನಿಷ್ಠೆಯಿಂದ ಕೂಡಿದ ದುಡಿಮೆ ಭಗವತಿಯ ಪೂಜೆಗೆ ಸಮ ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ೨೦೦೮-೦೯ನೇ ಸಾಲಿನ ಎರಡನೇ ಬ್ಯಾಚ್ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ ೭೨೪ನೇ ತುಲಾಭಾರ ಮತ್ತು ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಬೆವರ ಹನಿಯ ಸಂಪಾದನೆಯಿಂದ ಜೀವನ ಜೇನಾಗುತ್ತದೆ. ಒಂದು ಸಣ್ಣ ಇರುವೆ ಕೂಡ ನಮಗೆ ಅದ್ಭುತವಾದ ದುಡಿಮೆಯ ಹಾಗೂ ಶಿಸ್ತಿನ ಪಾಠ ಕಲಿಸುತ್ತದೆ. ಮನುಷ್ಯ ನಿಸರ್ಗವನ್ನು ವಿವೇಕ ಪ್ರಜ್ಞೆಯಿಂದ ಸೂಕ್ಷ್ಮತೆಯಿಂದ ಅವಲೋಕಿಸುತ್ತಿರಬೇಕು. ಅಂದಾಗ ನಾವು ಸಹಜವಾಗಿ ಪ್ರಕೃತಿ ಪಾಠ ಶಾಲೆಯ ವಿದ್ಯಾರ್ಥಿಗಳಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಯಾವುದೇ ಕೆಲಸವಿದ್ದರೂ ಅದನ್ನು ಕಾಯಕ ನಿಷ್ಠೆಯಿಂದ ಮಾಡಿದರೆ ಶ್ರೇಷ್ಠತೆ ಸಾಧಿಸಬಹುದಾಗಿದೆ. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು, ದೊರೆತದು ಪ್ರಸಾದವೆಂದುಣ್ಣು ಗೊಣಗಿಡದೆ, ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ, ಹೊರಡು ಕರೆ ಬರಲï ಅಳದೆ ಮಂಕುತಿಮ್ಮ ಎನ್ನುವ ಕಗ್ಗದ ಈ ಅದ್ಭುತ ಸಂದೇಶ ಜೀವನ ದರ್ಶನದ ಪಾಠ ಮಾಡಿಸುವಂತಿದೆ. ಒಂದು ದೀಪ, ಒಂದು ಮೇಣದಬತ್ತಿ, ಒಂದು ಗಂಧದ ಕಡ್ಡಿ ನಮಗೆ ನಿರ್ಜೀವ ವಸ್ತುಗಳೇನಿಸಿದರೂ, ದೇಹ ದಂಡಿಸಿ ಅನ್ಯರಿಗೆ ಉಪಕಾರಿಯಾಗು ಅನ್ನುವ ಪಾಠ ಕಲಿಯದೆ ಇರಲಾರೆವು. ನಮ್ಮ ದುಡಿಮೆಯ ಒಂದಿಷ್ಟು ಭಾಗವಾದರೂ ಸಮಾಜಮುಖಿಯಾಗಿ, ಧರ್ಮ ಮುಖಿಯಾಗಿ ಹರಿದಾಗ ಮಾತ್ರ ಅದರ ಫಲ ಶ್ರುತಿ ಮಂಗಳಕರವಾಗುತ್ತದೆ ಎಂದರು.

ನವರಾತ್ರಿ ಒಂದು ಉತ್ಸವ ಮಾತ್ರ ಆಗಿರದೆ ಅಧ್ಯಾತ್ಮ ಸಾಧನೆಯ ಪರ್ವಕಾಲ, ಹಾಗಾಗಿ ಜಗನ್ಮಾತೆ ಹಾಗೂ ಹಾರಕೂಡ ಚನ್ನಬಸವ ಶಿವಯೋಗಿಗಳು ಎಲ್ಲರ ಬದುಕಲ್ಲಿ ಸಮೃದ್ಧಿಯ ಶಶಿಕಿರಣ ಹೊಮ್ಮಿಸಲಿ ಎಂದು ಶುಭ ಹಾರೈಸಿದರು.

ವಿಜಯಕುಮಾರ ನಾಗವಾರ ಮಾತನಾಡಿದರು. ಶಾಲೆಯ ೨ನೇ ಬ್ಯಾಚ್ ವಿದ್ಯಾರ್ಥಿಗಳಾದ ಸಂಗಮೇಶ ಕನಕಪುರ, ಮಹಾದೇವ ದೇಗಾಂವ, ನಿತ್ಯಾನಂದ ಏಕಲೂರವಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೀದರ್ ಜಿಪಂ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ವಿಜಯಕುಮಾರ ನಾಗವಾರ, ಭೀಮಶಾ ಜೋಜನ, ಅಪ್ಪಣ್ಣ ಜನವಾಡ, ಡಾ.ರಾಜಶೇಖರ ಮದರಿ, ಗುರುಲಿಂಗಪ್ಪ ದೇಗಾಂವ ಇದ್ದರು.

ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಅಂಬಿಕಾ ಸ್ವಾಮಿ ಸ್ವಾಗತಿಸಿದರು. ಗುರುಲಿಂಗಪ್ಪ ದೇಗಾಂವ ನಿರೂಪಣೆ ಮಾಡಿ ಪ್ರಾಸ್ತಾವಿಕ ಮಾತನಾಡಿದರು. ಅರುಣ ಪತ್ತಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net