

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಹಿರಿಯ ಶ್ರೀ ಪಟ್ಟದ ಗುರುಸ್ವಾಮೀಜಿ ಅವರು ಮಂಗಳವಾರ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಅಂತಿಮ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಲಕ್ಷಾಂತರ ಭಕ್ತರ ಕಣ್ಣೀರಿನೊಂದಿಗೆ ಪಾರ್ಥಿವ ಶರೀರ ಮೆರವಣಿಗೆ ನಡೆಯಿತು.
ಬೆಳಗಿನ ಜಾವ 5ಗಂಟೆಗೆ ಶ್ರೀಗಳ ಲಿಂಗೈಕ್ಯದ ಸುದ್ದಿ ಸಾಮಾಜಿಕ ಜಾಲ ತಾಣದ ಮೂಲಕ ಎಲ್ಲೆಡೆ ಹರಡಿತ್ತು. ಇದರಿಂದ ತಮಿಳುನಾಡು ಸೇರಿದಂತೆ ಚಾ.ನಗರ, ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಸಾಲೂರು ಬೃಹನ್ಮಠಕ್ಕೆ ಆಗಮಿಸಿದ್ದರು. ಮ.ಬೆಟ್ಟದ ತಪ್ಪಲಿನ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು, ಬೇಡಗಂಪಣ ಸಮುದಾಯದ ಅರ್ಚಕರು ನೆರೆದಿದ್ದರು. ಜತೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ, ಕನಕಪುರ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡದ ಶ್ರೀಕಂಠ ಸ್ವಾಮೀಜಿ ಸೇರಿದಂತೆ ವಿವಿಧ ಜಿಲ್ಲೆಗಳ ಮಠಾಧೀಶರು, ಶಾಸಕರಾದ ಎಂ.ಆರ್ ಮಂಜುನಾಥ್, ಎಚ್.ಎಂ.ಗಣೇಶ್‌ಪ್ರಸಾದ್, ಮಾಜಿ ಶಾಸಕ ಆರ್. ನರೇಂದ್ರ, ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಎಸ್ಪಿ ಡಾ.ಬಿ.ಟಿ ಕವಿತಾ, ಜಿ.ಪಂ. ಸಿಇಒ ಮೋನಾರೂತ್, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಉಪ ವಿಭಾಗಾಧಿಕಾರಿ ಬಿ.ಆರ್ ಮಹೇಶ್, ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಹಾಗೂ ಇತರ ಗಣ್ಯರು ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಅಂತ್ಯಕ್ರಿಯೆ: ಸಾಲೂರು ಬೃಹನ್ಮಠದ ಸಭಾಂಗಣದಲ್ಲಿ ಶ್ರೀಗಳ ಪಾರ್ಥಿವ ಶರೀರವನ್ನು ಮಧ್ಯಾಹ್ನ 1.30ರವರೆಗೂ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಆಗಮಿಸಿದ ಭಕ್ತರು, ಅಧಿಕಾರಿಗಳು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಇತರ ಶ್ರೀಗಳ ಜತೆಗೂಡಿ ಗುರುಸ್ವಾಮೀಜಿ ಅವರ ಪ್ರಾರ್ಥಿವ ಶರೀರಕ್ಕೆ ಮಠದ ಧಾರ್ಮಿಕ ಸಂಪ್ರದಾಯದಂತೆ ವಿಧಿ ವಿಧಾನದೊಂದಿಗೆ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಬಿದಿರಿನ ಅಚ್ಚೆಗಳಿಂದ ತಯಾರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಲಿಂಗೈಕ್ಯ ಶ್ರೀಗಳನ್ನು ಕೂರಿಸಲಾಯಿತು. ಈ ವೇಳೆ ಪೂಜೆ ಸಲ್ಲಿಸಿ ಧೂಪದಾರತಿ ಬೆಳಗಿಸಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ಮಠದ ಆವರಣದಿಂದ ಹೊರಟು ಅಂತರಗಂಗೆ, ದೇಗುಲ, ಪ್ರಾಧಿಕಾರದ ಕಚೇರಿ ರಸ್ತೆ, ತಂಬಡಗೇರಿಯ ರಾಜಬೀದಿಯಲ್ಲಿ ಸಾಗಿ ಮಠದ ಸಮೀಪದ ಜಮೀನನಲ್ಲಿ ಸಿದ್ಧಪಡಿಸಲಾಗಿದ್ದ ಕ್ರಿಯಾ ಸಮಾಧಿಯನ್ನು ತಲುಪಿತು. ಮೆರವಣಿಗೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್, ಮಾಜಿ ಶಾಸಕ ಆರ್.ನರೇಂದ್ರ, ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಬಳಿಕ ಸಂಜೆ 6.30ರ ವೇಳೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಎಲ್ಲರ ಮೊಗದಲ್ಲೂ ಮೌನದ ಛಾಯೆ ಆವರಿಸಿತ್ತು. ಕೆಲವರು ದುಗುಡ ವ್ಯಕ್ತಪಡಿಸಿದರು.
ಕಣ್ಣೀರಿಟ್ಟ ಕುಟುಂಬಸ್ಥರು: ಶ್ರೀಗಳ ನಿಧನದಿಂದ ಸಾವಿರಾರು ಭಕ್ತರು, ಅಧಿಕಾರಿಗಳು ಮಠಾಧೀಶರು ಆಗಮಿಸಿದ್ದು, ಬೆಳಗ್ಗೆಯಿಂದ ಸಂಜೆಯವರೆಗೂ ಮಠದಲ್ಲೇ ಬೀಡು ಬಿಟ್ಟಿದ್ದು, ಎಲ್ಲರಲ್ಲೂ ಭಾವನಾತ್ಮಕವಾಗಿ ಮೌನದ ಛಾಯೆ ಆವರಿಸಿತ್ತು. ಇತ್ತ ಲಿಂಗೈಕ್ಯ ಗುರುಸ್ವಾಮೀಜಿ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಗಮಿಸಿದ್ದು, ಶ್ರೀಗಳ ಸೇವೆಯನ್ನು ನೆನೆದು ಕಣ್ಣೀರು ಹಾಕಿದರು. ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಗೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಡಿವೈಎಸ್ಪಿ ಧರ್ಮೇಂದ್ರ ಅವರು ಮೊಕ್ಕಾಂ ಹೂಡಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.