

ಹನೂರು : ರಾಜ್ಯ ಸರ್ಕಾರಿ ನೌಕರರ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಗುರುಸ್ವಾಮಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಅ.28 ರಂದು ನಡೆದ ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ವಿವಿಧ ಇಲಾಖೆಯ 14 ನೌಕರರನ್ನು ವಿರೋಧವಾಗಿ ಆಯ್ಕೆ ಮಾಡಲಾಗಿತ್ತು. 5 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇವರಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಗುರುಸ್ವಾಮಿ, ಗಿರೀಶ್, ಚಂದ್ರನ್, ಪ್ರೌಢಶಾಲಾ ವಿಭಾಗದಿಂದ ರವೀಶ್‌ಕುಮಾರ್ ಹಾಗೂ ಕಾಲೇಜು ಶಿಕ್ಷಣ ವಿಭಾಗದಿಂದ ನರೇಂದ್ರನಾಥ್ ಜಯಗಳಿಸಿದ್ದರು. ನ.16 ರಂದು ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ನಿಗಧಿಪಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪಟ್ಟಣದ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಗುರುಸ್ವಾಮಿ ಹಾಗೂ ಗಿರೀಶ್ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಪ್ರಕ್ರಿಯೆಯಲ್ಲಿ ಗುರುಸ್ವಾಮಿ 17 ಮತ ಪಡೆದು ಜಯಗಳಿಸುವುದರ ಮೂಲಕ 2ನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.
ಇನ್ನು ಘಟಕದ ರಾಜ್ಯ ಪರಿಷತ್ ಸದಸ್ಯರಾಗಿ ಪಿಡಿಒ ರಾಮು, ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಮುನಿಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಅಮಲದಾಸ್ ಕಾರ್ಯನಿರ್ವಹಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ನಾಗಸುಂದ್ರ, ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಮಾದೇಶ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಸಂಘದ ನಿರ್ದೇಶಕರಾದ ಶಾಂತರಾಜು, ಶ್ರೀನಿವಾಸನಾಯ್ಡು, ವೆಂಕಟರಾಜು ಹಾಗೂ ಇನ್ನಿತರರು ಇದ್ದರು.