

ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಜಗದ್ಗುರು ಮೂರುಸಾವಿರ ಮಠದ ಮಹಾಸಂಸ್ಥಾನದಲ್ಲಿ ಶ್ರಾವಣ ಪ್ರಯುಕ್ತ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕರ್ತೃ ಶ್ರೀ ಜಗದ್ಗುರು ಗುರುಸಿದ್ಧೇಶ್ವರರ ರಥೋತ್ಸವ ಶ್ರಾವಣ ಕೊನೇ ಸೋಮವಾರ ಸಂಭ್ರಮದಿಂದ ನಡೆಯಿತು.
ಅಪಾರ ಭಕ್ತ ಸಮೂಹದ ಮಧ್ಯೆ ಸೋಮವಾರ ಸಂಜೆ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಭಕ್ತರು ಹರ್ ಹರ್ ಮಹಾದೇವ, ಶ್ರೀ ಗುರುಸಿದ್ದೇಶ್ವರ ಮಹಾರಾಜ್ ಕೀ ಜೈ… ಎಂದು ಜಯಘೋಷ ಮೊಳಗಿಸುತ್ತ ತೇರಿನೊಂದಿಗೆ ಸಾಗಿದರು. ಅನೇಕ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಉತ್ತತ್ತಿ, ಲಿಂಬೆಹಣ್ಣು, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.
ಗುರುಸಿದ್ದೇಶ್ವರರ ಉತ್ಸವ ಮೂರ್ತಿಯೊಂದಿಗೆ ಪಲ್ಲಕ್ಕಿ ಉತ್ಸವವು ರಥದ ಮುಂದೆ ಸಾಗಿತು.
ವಿವಿಧ ವಾದ್ಯಮೇಳಗಳು, ಕರಡಿ ಮಜಲು ಇತ್ಯಾದಿಗಳು ಉತ್ಸವಕ್ಕೆ ಮೆರಗು ನೀಡಿದವು.
ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು. ಮೂರುಸಾವಿರ ಮಠ ರಸ್ತೆಯಲ್ಲಿ ಸಾಗಿದ ರಥವು ವಾಪಸ್ ಶ್ರೀ ಮಠಕ್ಕೆ ಆಗಮಿಸಿತು.
ರಥೋತ್ಸವದ ನಂತರ ಶ್ರೀಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ಸಭಾ ಮಂಟಪದ ಶೂನ್ಯ ಸಿಂಹಾಸನದಲ್ಲಿ ಆಸೀನರಾದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಗಳು ಭಕ್ತರಿಗೆ ಆಶೀರ್ವಚನ ನೀಡಿದರು. ಅನೇಕ ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಬೆಳಗ್ಗೆಯಿಂದ ಸಾವಿರಾರು ಭಕ್ತರು ಕರ್ತೃ ಶ್ರೀ ಗುರುಸಿದ್ದೇಶ್ವರರ ಗದ್ದುಗೆ ದರ್ಶನ ಪಡೆದರು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಅಮರೇಶ ಹಿಪ್ಪರಗಿ, ರಾಜು ಜರತಾರರ, ಮೋಹನ ಅಸುಂಡಿ, ರವಿಕುಮಾರ ಬಡ್ನಿ, ಬಸವರಾಜ ಯಕಲಾಸಪುರ, ಚನ್ನಬಸಪ್ಪ ಧಾರವಾಡ ಶೆಟ್ಟರ್, ವೀರೇಶ ಸಂಗಳದ, ಇತರರು ಉಪಸ್ಥಿತರಿದ್ದರು.