

ಅಮೀನಗಡ: ಗಚ್ಚಿನಮಠದ ಶಂಕರಾಜೇಂದ್ರ ಮಹಾಸ್ವಾಮಿಗಳು ಹಮ್ಮಿಕೊಂಡಿರುವ ಗುರುವಿನ ನಡಿಗೆ, ಭಕ್ತರ ಕಡೆಗೆ ಪಾದಯಾತ್ರೆ ಭಕ್ತ ಸಮೂಹದಲ್ಲಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗುವ ಜತೆಗೆ ಗುಡಿ, ದರ್ಗಾ, ಎಲ್ಲವೂ ಮೀರಿ ಸಂಸ್ಕಾರ, ಪರಂಪರೆ ಹಾಗೂ ವಿಚಾರಗಳ ವಿನಿಮಯಕ್ಕೆ ಹೊಸ ನಾಂದಿ ಹಾಡಿದೆ.
ಸ್ಥಳೀಯ ಪ್ರಭುಶಂಕರೇಶ್ವರ ಅನುಭವ ಮಂಟಪದಲ್ಲಿ ಜ.5ರ ವರೆಗೆ ನಡೆಯುವ ಬಸವ ಪುರಾಣ ಹಿನ್ನೆಲೆಯಲ್ಲಿ ಶಂಕರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು ಪಾದಯಾತ್ರೆ ಕೈಗೊಂಡಿದ್ದು ಜನತೆಗೆ ದುರಾಚಾರ ಹಾಗೂ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಲು ತಿಳಿಸಿದ್ದಾರೆ.
ಮೊದಲ ದಿನ ಪಟ್ಟಣದ ಗಣೇಶ ದೇವಸ್ಥಾನದಿಂದ ಶ್ರೀಗಳ ಪಾದಯಾತ್ರೆ ಆರಂಭಗೊಂಡು ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿತು.
ಪಾದಯಾತ್ರೆ ಮಾರ್ಗದಲ್ಲಿ ರಸ್ತೆಯನ್ನು ತಳಿರು ತೋರಣದಿಂದ ಶೃಂಗರಿಸಿ, ರಂಗೋಲಿ ಬಿಡಿಸಲಾಗಿತ್ತು. ಈ ಯಾತ್ರೆಯಲ್ಲಿ ಎಲ್ಲ ಸಮುದಾಯದವರು ಭಾಗವಹಿಸುತ್ತಿದ್ದು, ಸಮಾಜದಲ್ಲಿ ಶಾಂತಿ ಸೌಹಾರ್ದತೆಯ ವಾತವರಣ ನಿರ್ಮಾಣವಾಗುತ್ತಿದೆ.
ಧಾರ್ಮಿಕವಾಗಿ ಹಿಂದುಳಿಯುತ್ತಿರುವ ಹಾಗೂ ಗೊಂದಲದಲ್ಲಿ ಮುಳುಗುತ್ತಿರುವ ಮಾನವ ಜನಾಂಗದಲ್ಲಿ ಪರಿಣಾಮಕಾರಿ ಪ್ರಭಾವ ಬೀರುವುದು ಧರ್ಮವಾಗಿದೆ. ಹೀಗಾಗಿ ಧಾರ್ಮಿಕವಾಗಿ ಹಿಂದುಳಿಯುತ್ತಿರುವವರ ಮನಸ್ಸಿನಲ್ಲಿ ಉಂಟಾಗುವ ಗೊಂದಲಗಳಿಗೆ ಬೆಳಕು ನೀಡುವುದು ಬಸವ ಪುರಾಣದ ಉದ್ದೇಶ. ಗಚ್ಚಿನಮಠದ ಶಂಕರರಾಜೇಂದ್ರ ಮಹಾಸ್ವಾಮಿಗಳು
ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ಕಾರ್ಯಕ್ರಮಕ್ಕೆ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುರಾಣ ಆಲಿಸಿ ಪಾವನರಾಗುತ್ತಿದ್ದೇವೆ. ಯಮನೂರ ಕತ್ತಿ, ಹಾಲುಮತ ಸಮಾಜದ ಯುವ ಮುಖಂಡ