ಬದುಕಿನ ಸಾಕ್ಷಾತ್ಕಾರಕ್ಕೆ ಗುರುಕಾರುಣ್ಯ ಅಗತ್ಯ

22 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಮಷ್ಟಿ ಕೇಂದ್ರಿತ ಶ್ರೀಗುರುವಿನ ಉಪದೇಶದಿಂದ ಮಾತ್ರ ಮಾನವನ ಬದುಕು ರಾಗ-ದ್ವೇಷಗಳಿಂದ ಮತ್ತು ದ್ವಂದ್ವ-ವೈರುಧ್ಯಗಳಿಂದ ಮುಕ್ತವಾಗಿ ಮುಕ್ತಿಯ ಮೆಟ್ಟಿಲೇರಲು ಸಾಧ್ಯವಾಗುತ್ತದೆ. ಹೀಗಾಗಿ ಬದುಕಿನ ಸಾಕ್ಷಾತ್ಕಾರ ಸಂಪಾದನೆಗೆ ಗುರುಕಾರುಣ್ಯ ಅಗತ್ಯವಾಗಿದೆ ಎಂದು ನೆಗಳೂರು ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿರುವ ಶ್ರೀ ಕಲಬುರ್ಗಿ ಶರಣ ಬಸವೇಶ್ವರರ ಪುರಾಣ ಪ್ರವಚನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ನರನು ಹರನಾಗಲು, ಮಾನವನು ಮಹಾದೇವನಾಗಲು, ಜೀವಾತ್ಮ ಪರಮಾತ್ಮನಾಗಲು ಶ್ರೀ ಗುರು ಸಾನ್ನಿಧ್ಯದ ಮಾರ್ಗದರ್ಶನ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಹಾತಪಸ್ವಿಗಳಾಗಿರುವ, ಆದಿಶಕ್ತಿ ಮಾತೆಯ ನಿಜರೂಪ ದರ್ಶನ ಪಡೆದಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡ ಎಲ್ಲರಿಗೂ ಗುರುಕಾರುಣ್ಯ ಪ್ರಾಪ್ತವಾಗುತ್ತದೆ ಎಂದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಇಹದ ಬದುಕನ್ನು ಜಯಿಸಬೇಕಾಗಿದೆ. ದೇವರು ಇಲ್ಲವೇ ಧರ್ಮ ಗುರುಗಳ ಹೆಸರಿನಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಎಲ್ಲರೂ ಒಂದೆಡೆ ಭಕ್ತಿಯ ಭಾವನಾತ್ಮಕ ತನ್ಮಯತೆಯಲ್ಲಿ ಐಕ್ಯತೆ ಸಾಧಿಸಿ ಮನಸ್ಸುಗಳನ್ನು ತಿಳಿಗೊಳಿಸಿಕೊಳ್ಳುವ ಗುರಿ ಹೊಂದಿದಾಗ ಸಾರ್ಥಕತೆ ಒಡಮೂಡುತ್ತದೆ ಎಂದರು.

ಗುರುಮೂರ್ತಿ ಯರಗಂಬಳಿಮಠ, ವಿಜಯಕುಮಾರ ಇಟಗಿ ಮಾತನಾಡಿದರು. ಹಿರೇಮಠದ ಶಶಿಧರ ಶಾಸ್ತ್ರೀಜಿ ಪುರಾಣ ಪ್ರವಚನ ನೀಡಿದರು. ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಎಂ.ಸಿ. ಹುಲ್ಲೂರ, ವಿ.ಬಿ. ಕೆಂಚನಗೌಡರ, ಬಿ.ಸಿ.ಕೊಳ್ಳಿ, ಪರಮೇಶ್ವರ ಅಕ್ಕಿ, ಸುನೀಲ ಗುಡಿ, ಚಂಬಣ್ಣ ಉಂಡೋಡಿ, ಚೆನ್ನಬಸಪ್ಪ ಪೂಜಾರ, ನಿಂಗಪ್ಪ ಮಾದಿಗ್ಗೊಂಡ, ಶಿವಾನಂದ ತಡಕೋಡ, ಉಮೇಶ ಶಿರಕೋಳ, ಸೋಮಲಿಂಗಶಾಸ್ತ್ರೀ ಗುಡ್ಡದಮಠ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net