ಗುರಿ ತಲುಪಲು ಗುರುವಿನ ಮಾರ್ಗದರ್ಶನ ಅಗತ್ಯ

ನಗರದ ಶ್ರೀ ಕಮಲಮ್ಮ ಮತ್ತು ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ದರ್ಶನ್ ದ್ರುವ ನಾರಾಯಣ ಉದ್ಘಾಟಿಸಿದರು. ಶ್ರೀಕಂಠ, ಧರ್ಮ ರತ್ನಾಕರ, ಮಹೇಶ್ ಇತರರು ಇದ್ದರು.
ನಗರದ ಶ್ರೀ ಕಮಲಮ್ಮ ಮತ್ತು ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ದರ್ಶನ್ ದ್ರುವ ನಾರಾಯಣ ಉದ್ಘಾಟಿಸಿದರು. ಶ್ರೀಕಂಠ, ಧರ್ಮ ರತ್ನಾಕರ, ಮಹೇಶ್ ಇತರರು ಇದ್ದರು.
Published on

ನಂಜನಗೂಡು: ಸಮಾಜದ ಬದಲಾವಣೆಗೆ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಕ್ಷೇತ್ರದ ಶಾಸಕನಾಗಿ ನಿಮ್ಮೊಂದಿಗೆ ಹಾಗೂ ನಿಮ್ಮ ಹೋರಾಟಕ್ಕೆ ಕೈಜೋಡಿಸುತ್ತೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು.

ನಗರದ ಶ್ರೀ ಕಮಲಮ್ಮ ಗುರುಮಲ್ಲಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ನಂಜನಗೂಡು ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಗುರುವಂದನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಸೇವೆ ನೀಡಿದ ಶಿಕ್ಷಕರಿಗೆ ಗುರುವಂದನೆಯನ್ನು ಮಾಡಲಾಗುತ್ತಿದೆ. ಜೀವನದಲ್ಲಿ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಎಲ್ಲರಿಗೂ ಅಗತ್ಯ. ಇಲ್ಲಿ ನೆರೆದಿರುವ ಎಲ್ಲರಿಗೂ ಚಿಕ್ಕ ವಯಸ್ಸಿನಿಂದಲೂ ಶೈಕ್ಷಣಿಕವಾಗಿ ಮಾರ್ಗದರ್ಶನ ನೀಡುತ್ತಿರುವ ಶಿಕ್ಷಕರನ್ನು ಸ್ಮರಿಸಬೇಕು. ತಂದೆ ಮತ್ತು ತಾಯಿಗಿಂತ ಹೆಚ್ಚು ಸಮಯವನ್ನು ನಾವುಗಳು ಶಿಕ್ಷಕರೊಂದಿಗೆ ಕಳೆದಿದ್ದೇವೆ. ಆದ್ದರಿಂದ ನಮಗೆ ಮಾರ್ಗದರ್ಶನ ನೀಡಿದ ಶಿಕ್ಷಕರನ್ನು ಪ್ರತಿನಿತ್ಯ ನೆನಪಿಸಿಕೊಳ್ಳುವಂತಾಗಬೇಕು. ಈ ಉದ್ದೇಶದಿಂದಲೇ ನಮ್ಮ ತಂದೆಯ ಹೆಸರಿನಲ್ಲಿ ಎಜುಕೇಷನ್ ಫೌಂಡೇಶನ್ ನಿರ್ಮಾಣ ಮಾಡಿ ಹಲವು ಕಾರ್ಯಕ್ರಮಗಳನ್ನು ಪ್ರತಿವರ್ಷ ಮಾಡುತ್ತಿದ್ದೇವೆ ಎಂದರು.

ಶಿಕ್ಷಕರಿಗೂ ಕೂಡ ಹೆಚ್ಚಿನ ಅವಕಾಶಗಳು ಸಿಗಬೇಕಾಗಿದೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ. ಈಗಾಗಲೇ ತಮ್ಮ ಬೇಡಿಕೆಯಂತೆ ನಗರದಲ್ಲಿ ಗುರುಭವನ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಹೆಚ್ಚಿನ ಅನುದಾನ ತರಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಗುರುಭವನ ನಿರ್ಮಾಣ ಕಾಮಗಾರಿಗೆ ನೀಲಿನಕ್ಷೆಯನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಶಿಕ್ಷಕರಿಗೆ ಗುರುಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ಶಿಕ್ಷಕರ ಕುಂದುಕೊರತೆಗಳನ್ನು ಸದನದ ಒಳಗೆ ಮತ್ತು ಹೊರಗೆ ಚರ್ಚೆ ಮಾಡಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರಿಗೆ 30 ವರ್ಷಗಳಿಂದಲೂ ಬಡ್ತಿ ನೀಡದೆ ಸರ್ಕಾರಗಳು ಕಡೆಗಣಿಸುತ್ತಿದೆ. ಇಡೀ ರಾಜ್ಯದಲ್ಲಿ 1.5 ಲಕ್ಷ ಶಿಕ್ಷಕರ ಕೊರತೆಯಿದೆ. ಇದರ ಪರಿಣಾಮ ಎಲ್ಲ ಕಡೆಗಳಲ್ಲಿ ಅತಿಥಿ ಶಿಕ್ಷಕರು ನೇಮಕಗೊಂಡಿದ್ದಾರೆ. ಕೇವಲ 12 ಸಾವಿರ ರೂ. ಸಂಬಳ ಪಡೆದು ಜೀವನ ನಡೆಸಲು ಸಾಧ್ಯವಿಲ್ಲ. ಈಗಾಗಲೇ ಕೆಲವರು 50 ವರ್ಷ ಪೂರೈಸಿದವರಿಗೆ ಸರ್ಕಾರದ ಕೆಲಸ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಶಿಕ್ಷಕರ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯ ಭಾಷಣಕಾರ ಶಿಕ್ಷಕ ಎಸ್.ಎಂ. ಸಿದ್ದರಾಜಪ್ಪ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸಾವಿತ್ರಿಬಾಯಿ ಫುಲೆ ಇಡೀ ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕರು. ಇವರು ಹುಟ್ಟಿದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಇಂದು ಭೌತಿಕವಾಗಿ ಇಲ್ಲದಿದ್ದರೂ ಬೌದ್ಧಿಕವಾಗಿ ನಮ್ಮೊಂದಿಗೆ ಇದ್ದಾರೆ. ಜಗತ್ತನ್ನು ಬದಲಾವಣೆ ಮಾಡುವ ಪ್ರಮುಖ ಅಸ್ತ್ರ ಶಿಕ್ಷಣ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ನಿವೃತ್ತಿ ಹೊಂದಿದ 46ಕ್ಕೂ ಹೆಚ್ಚು ಶಿಕ್ಷಕರಿಗೆ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು. ತಾಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಸುಮಾರು 54 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ನೀಡಿದ ಶಾಲೆಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮರತ್ನಾಕರ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ದೀಪು, ಜಂಟಿ ಕಾರ್ಯದರ್ಶಿ ಎಂ.ಎ.ರಂಗನಾಥನ್, ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಸ್ವಾಮಿ, ಎಂ.ಎಸ್. ಸಿದ್ದರಾಜಪ್ಪ, ಸಿ.ಎಂ.ಶಂಕರ್, ರಾಜಕುಮಾರ, ಎಚ್.ಎಸ್.ಮಹೇಶ, ಸೋಮಶೇಖರ್, ಬಿಆರ್‌ಸಿ ಬಾಲರಾಜ್, ಸುನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net