ವಿದ್ಯಾರ್ಥಿಗಳ ಶ್ರೇಯಸ್ಸಿಗೆ ಗುರು ಮಾರ್ಗದರ್ಶನ ಅತ್ಯಗತ್ಯ

SVR GURUVANDANE
Published on

ಸವಣೂರ: ವ್ಯಕ್ತಿ ಶಕ್ತಿಯಾಗಿ ಬೆಳೆಯುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸತತ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳ ಸಮಗ್ರ ಅಭ್ಯುದಯಕ್ಕೆ ಪರಿವರ್ತನಕಾರರಾಗಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಾರೆ ಎಂದು ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಶ್ರೀ ಲಲಾಟೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1993ರಿಂದ 2000ವರೆಗೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನಾ-ಸ್ನೇಹ ಸಂಗಮ ಸಂಭ್ರಮ ಸಮಾರಂಭ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಪ್ರತಿಯೊಬ್ಬ ಮನುಷ್ಯನ ಬದುಕಿನ ಶ್ರೇಯಸ್ಸಿಗೆ ಗುರುವಿನ ಮಾರ್ಗದರ್ಶನ ಅತ್ಯಗತ್ಯ. ಗುರು ಇಲ್ಲದೇ ಅರಿವು ಅಸಾಧ್ಯ ಎಂದರು.

ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗರಾಜ ಬಂಡಿವಡ್ಡರ ಮಾತನಾಡಿ, ಈ ನಾಡಿನ ಮಠ-ಮಾನ್ಯಗಳು ಹಿಂದಿನ ಕಾಲದಿಂದಲೂ ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಸಮಾಜ ನಿರ್ವಣಕ್ಕೆ ಮಹತ್ವದ ಕೊಡುಗೆ ನೀಡಿವೆ. ಅವುಗಳ ಕಾರ್ಯ ಶ್ಲಾಘನೀಯ ಎಂದರು.

ಶಾಲೆಯ ಮುಖ್ಯಗುರು ಸಿ.ಜಿ. ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುವಿನ ಸಂಸ್ಕಾರದ ಪರೀಕ್ಷೆಯಲ್ಲಿ ಶಿಕ್ಷಣ ಪಡೆದ ಶಿಷ್ಯನ ಬಾಳು ಉಜ್ವಲಗೊಳ್ಳುತ್ತದೆ. ಬದುಕಿಗೆ ಬೇಕಾದ ಲೌಕಿಕ ಮಾರ್ಗವನ್ನು ಗುರು ತೋರಬಲ್ಲವನಾಗಿದ್ದಾನೆ ಎಂದರು.

ಹಳೆಯ ವಿದ್ಯಾರ್ಥಿಗಳು ಶಾಲಾ ಕಾರ್ಯಾಲಯಕ್ಕೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಪೀಠೋಪಕರಣ ಕೊಡುಗೆಯಾಗಿ ನೀಡಿದರು. ಜಯಮ್ಮ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲೆಯ ನಿವೃತ್ತ ಶಿಕ್ಷಕರಾದ ವಿ.ವಿ. ಗುಡಗೇರಿ, ಆರ್. ಎಸ್. ಪಾಟೀಲ, ಎಸ್.ಎನ್. ತಾಯಮ್ಮನವರ, ಎಲ್.ಎಂ. ದೇಸಾಯಿಮಠ, ಎಸ್.ಬಿ. ಗಂಗಣ್ಣವರ, ಬಿ.ಎಂ. ಆರಾಧ್ಯಮಠ, ಎಚ್.ಎಫ್. ದ್ಯಾವನಗೌಡ್ರ, ಗೀತಾ ಕಲಾಲ, ಶಿವಲೀಲಾ ಅಂಕಲಕೋಟಿ, ಸುರೇಖಾ ನೆರಲೀಕರ, ಅಂಜನಾ ಬುತ್ತಿ, ಶಂಕ್ರಪ್ಪ ಮುರಿಗೆಣ್ಣನವರ, ಸಿಪಾಯಿಗಳಾದ ಗಣೇಶ ಸಂಕ್ಲೀಪುರ, ಮಲ್ಲಪ್ಪ ಪೂಜಾರ ಹಾಗೂ ಅಗಲಿದ ಶಿಕ್ಷಕರ ಪರಿವಾರ ಮತ್ತು ಸ್ನೇಹಿತರ ಪಾಲಕರನ್ನು ಗೌರವಿಸಲಾಯಿತು.

ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಕವಿತಾ ಹಿರೇಮಠ, ವೀರಣ್ಣ ಚರಂತಿಮಠ, ಡಾ. ಗುರುಪಾದಯ್ಯ ಸಾಲಿಮಠ, ಶಿಲ್ಪಾ ಅತ್ತಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net