ವಿಜಯಪುರ : ಬದುಕಿನಲ್ಲಿ ಗುರುವಿನ ಸಾಂಗತ್ಯ

WhatsApp Image 2022-10-20 at 1.03.34 PM
ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ 120ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಹಿರೇಮಠ ಸಂಸ್ಥಾನ ಭಾಲ್ಕಿಯ ಬಸವಲಿಂಗ ದೇವರು ಅವರು ಮಾತನಾಡಿದರು. ಕಾಖಂಡಕಿಯ ಗುರುದೇವಾಶ್ರಮದ ಸಂದೀಪ ಮಹೋದಯ ಹಾಗೂ ಸಂಗನಬಸವ ದೇವರು ಇದ್ದರು.
Published on

ವಿಜಯಪುರ : ಗುರುವಿನ ಬದುಕೇ ಒಂದು ಉಪದೇಶ. ಉತ್ತಮ ಗುರು ಸಿಗುವುದೇ ದುರ್ಲಭ. ಅಪರೂಪದ ಗುರುವು ಸಿಕ್ಕಲ್ಲಿ ಅದರಿಂದ ಲಾಭಗಳೇ ಹೆಚ್ಚು ಎಂದು ಕಾಖಂಡಕಿಯ ಗುರುದೇವಾಶ್ರಮದ ಸಂದೀಪ ಮಹೋದಯ ನುಡಿದರು.

ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಹೊರವಲಯದಲ್ಲಿರುವ ಗುರುದೇವ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮಿಗಳ 120ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪರಿಶುದ್ಧ ಮನಸ್ಸಿನಿಂದ ಭಕ್ತರು, ಆಸ್ತಿಕರು ಮತ್ತು ಶಿಷ್ಯಂದಿರು ಅಂತಹ ಗುರುವಿನ ಬೋಧೆಯ ಸದುಪಯೋಗ ಪಡಿಸಿಕೊಳ್ಳಬೇಕು. ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಶ್ರೇಷ್ಠ ಯೋಗಿಗಳು. ಅವರು ಏನೆಂದು ಮತ್ತು ಹೇಗೆಂದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲಾ ಹಿರಿಯರಿಗೂ ಗೊತ್ತಿದೆ ಎಂದರು.

ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಅವರ ಅಂಗಿಗೆ ಕಿಸೆಗಳಿಲ್ಲ. ಆದರೆ ಅಂದಿನ ಮಲ್ಲಿಕಾರ್ಜುನ ಶ್ರೀಗಳು ಅಂಗಿಯನ್ನೇ ಧರಿಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರು ವೈರಾಗ್ಯಮೂರ್ತಿಗಳಾಗಿ ಮನುಕುಲದ ಮನಸ್ಸುಗಳನ್ನು ಸ್ವಚ್ಛ ಮಾಡಲು ಸೇವೆಗೈದಿದ್ದಾರೆ. ಅವರಿಗೆ ಯಾವುದೇ ಆಶ್ರಮಗಳಿರಲಿಲ್ಲ. ಹೋದಕಡೆಗಳಲ್ಲೆಲ್ಲಾ ಎಲ್ಲೋ ಒಂದು ಮರದ ಕೆಳಗೆ ಕೂತು ಆಶೀರ್ವಚನ ಮತ್ತು ಪ್ರವಚನ ಮಾಡಿ ಹೋಗುತ್ತಿದ್ದರು. ಅವರ ಬೋಧೆಯಲ್ಲಿ ಮಿಂದು ಶ್ರೇಷ್ಠ ಎನಿಸಿಕೊಂಡ ಸಿದ್ದೇಶ್ವರ ಸ್ವಾಮೀಜಿ ಅವರು ಇಂದು ಈ ಕಾಖಂಡಕಿ ಗ್ರಾಮಕ್ಕೆ ಬಂದು ಇದನ್ನು ಕಲ್ಯಾಣ ಕಾಖಂಡಕಿಯನ್ನಾಗಿ ಮಾಡಿದ್ದಾರೆ ಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಹಿರೇಮಠ ಸಂಸ್ಥಾನ ಭಾಲ್ಕಿಯ ಬಸವಲಿಂಗ ದೇವರು ಮಾತನಾಡಿ, ಭಗವಂತನು ನಮಗೆ ಕರುಣಿಸಿದಷ್ಟು ದಿನಗಳನ್ನು ಆನಂದವಾಗಿ ಕಳೆಯೋಣ. ಗಿಡ, ಮರ, ನದಿ,ಪರ್ವತದ ಬಳಿಗೆ ಹೋದಾಗ ಹೇಗೆ ಸಮಾಧಾನ ಸಿಗುವುದೋ ; ಅಂತೆಯೇ ಒಬ್ಬ ಸಂತ ಗುರುವಿನ ಬಳಿ ಬಂದಾಗಲೂ ಅಷ್ಟು ಸಮಾಧಾನ ಮತ್ತು ಶಾಂತಿ ದೊರೆವುದು. ರತ್ನಾಕರ, ಉರಿಲಿಂಗ ಪೆದ್ದಿ, ವಿವೇಕಾನಂದ, ಚಂದ್ರಗುಪ್ತ ಮೌರ್ಯ ಇತ್ಯಾದಿಯರ ಬದುಕಿನಲ್ಲಿ ಗುರುವಿನ ಸಾಂಗತ್ಯ ದೊರೆತೊಡನೆಯೇ ಅವರೆಲ್ಲರ ಬದುಕು ಹೇಗೆ ಪರಿವರ್ತನೆಯಾಯಿತೋ ; ಹಾಗೆಯೇ ನಮ್ಮೆಲ್ಲರ ಬದುಕನ್ನು ಸಹ ಹಸನುಗೊಳಿಸಲು ಸಿದ್ದೇಶ್ವರ ಸ್ವಾಮೀಜಿ ಅವರಂತಹ ಗುರುಗಳ ವಾಣಿಯ ಸಾಮೀಪ್ಯ ಸಿಕ್ಕಿರುವುದು ನಮ್ಮ - ನಿಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು.

ಬಸವ ಕಲ್ಯಾಣದ ಸಂಗನಬಸವ ದೇವರು, ಶ್ರೀಮಂತ ಭೀಮಪ್ಪ ಚಿನಗುಂಡಿ, ಚಂದ್ರಶೇಖರ್ ಲಕ್ಷ್ಮ ಣ ಸಿದರಡ್ಡಿ, ಮಾದರ ಚನ್ನಯ್ಯ, ಸದಾಶಿವ ತಳಗೇರಿ, ಲಕ್ಷ್ಮಣ ಡಾಲಿನವರ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net