ಕಕ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ

gururaj karajagi
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಲ್ಲ, ವಚನಗಾರರು, ದಾಸರು, ಸೂಫಿಗಳು, ಸಾಹಿತಿಗಳ ಶ್ರೀಮಂತ ನಾಡಾಗಿದ್ದು, ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದ ಜ್ಞಾನ ಕೊರತೆ, ಇಂಗ್ಲಿಷ್ ಭೀತಿ ಇದೆ. ಅದನ್ನು ನೀಗಿಸಲು ಮೌಲ್ಯಯುತ ಶಿಕ್ಷಣ ನೀಡಲು ವೇದಿಕ್ ಶಿಕ್ಷಣ ಸಂಸ್ಥೆ ಆರಂಭಿಸಲಾಗುತ್ತಿದೆ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ಧಾರವಾಡ, ಬೆಂಗಳೂರು, ಮಂಗಳೂರಿಗೆ ಹೋಗಲು ನಮ್ಮ ಭಾಗದ ಮಕ್ಕಳಿಗೆ ಆಗುವುದಿಲ್ಲ. ಆದ್ದರಿಂದ ಅಲ್ಲಿನ ಪರಿಣಿತ ಉಪನ್ಯಾಸಕರು, ತಂತ್ರಜ್ಞರನ್ನು ಕರೆತಂದು ಪಾಠ ಬೋಧಿಸುವ, ಫೌಂಡೇಷನ್ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಐಐಟಿಗೆ ಹೋಗುವುದು ಅಕಾಡೆಮಿಕ್ ವಿಚಾರ. ಅದರ ಹೊರತುಪಡಿಸಿ ಮಾನಸಿಕವಾಗಿ ಬಲಿಷ್ಠರಾಗಿ ಹೊರಬರಬೇಕು. ಮೌಲ್ಯಗಳನ್ನು ಅರಿತರೆ ಐಐಟಿ, ನೀಟ್ ಮಾತ್ರವಲ್ಲ ಬೇರೆ ಯಾವುದೇ ವಿಷಯ ಆಯ್ಕೆ ಮಾಡಿಕೊಂಡರು ಸದೃಢವಾಗಿ ನೆಲೆ ನಿಲ್ಲುತ್ತಾರೆ. ಐಐಟಿ ಪ್ರವೇಶಕ್ಕೆ ಹೆಚ್ಚುವರಿ ಕೌಶಲ ಬೇಕಾಗುತ್ತದೆ. ಅದಕ್ಕೆ ಪಿಯು ಪ್ರಥಮ, ದ್ವಿತೀಯ ವರ್ಷ ಸಾಕಾಗಲ್ಲ. ಆದ್ದರಿಂದಲೇ ನಮ್ಮ ಸಂಸ್ಥೆಯಲ್ಲಿ 8, 9, 10ನೇ ತರಗತಿಯವರಿಗೆ ಬುನಾದಿ ತರಬೇತಿ ನೀಡಲಾಗುತ್ತದೆ. ವಿಷಯದೊಂದಿಗೆ ಮಾನಸಿಕ ಸಿದ್ಧತೆ ಮಾಡಲಾಗುತ್ತಿದೆ. ಹೆಚ್ಚಿನ ಯೋಚನಾ ಶಕ್ತಿ ಬೆಳೆಸಲಾಗುತ್ತದೆ. ಡಿಸೆಂಬರ್‌ವರೆಗೆ ತರಬೇತಿ ನೀಡಿ, ನಂತರ ಪರೀಕ್ಷೆಗೆ ಸಿದ್ಧತೆ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರಮುಖರಾದ ದಿನೇಶ ಕುಲ್ಕರ್ಣಿ, ಸಂತೋಷ ಗೌಡ, ಗಣೇಶ ಹೆಗ್ಗಡೆ, ಮಮತಾ ಪಾಟೀಲ್, ಮಂಜುಳಾ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net