

ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಗುರುವಾರ ಗುರು ಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರ, ಸಂಭ್ರಮದಿಂದ ನಡೆದವು.
ಬೆಳಗ್ಗೆ ಕಾಕಡಾರತಿ ಪೂಜೆ, ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ದೇವಸ್ಥಾನ ಆವರಣದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಭಕ್ತ ಸಮೂಹದ ಮಧ್ಯೆ ವಿಜೃಂಭಣೆಯಿಂದ ಜರುಗಿತು.
ನಂತರ ನಡೆದ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ನ್ಯಾಯವೇದಾಂತಾಚಾರ್ಯ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿ, ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಗುರುವಿನ ಉಪದೇಶ ಪ್ರಮುಖ ಘಟ್ಟವಾಗಿದೆ. ಗುರುಪದೇಶದ ನಂತರವೇ ಆತನ ಜೀವನ ಪರಿಪೂರ್ಣವಾಗಿ ನಡೆಯುತ್ತದೆ ಎಂದರು.
ನೇತೃತ್ವ ವಹಿಸಿದ್ದ ಸಿದ್ಧಾರೂಢ ದರ್ಶನ ಪೀಠದ ಶ್ರೀ ಸಹಜಾನಂದ ಸ್ವಾಮೀಜಿ, ಗುರುವಿನ ಉಪದೇಶ ಆಗದ ಹೊರತು ಯಾವುದೇ ವ್ಯಕ್ತಿ ಪರಿಪೂರ್ಣನಾಗಲಾರ ಎಂದರು.
ರನ್ನಬೆಳಗಲಿಯ ಶ್ರೀ ಸದಾಶಿವ ಗುರೂಜಿ, ತಳಕಟನಾಳದ ಶ್ರೀ ಆತ್ಮಾನಂದ ಸ್ವಾಮೀಜಿ, ಶಾಂತಾನಂದ ಸ್ವಾಮೀಜಿ, ಮಾತೋಶ್ರೀ ಶಶಿಕಲಾ ಮಾತಾ ಇತರರು ಉಪಸ್ಥಿತರಿದ್ದರು.
ಸ್ವಾಮೀಜಿಗಳನ್ನು ಸನ್ಮಾನಿಸಲಾಯಿತು.
ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವಿರ ಮುಂಗುರವಾಡಿ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ ಕಮಿಟಿ ಭಕ್ತರ ಮೇಲ್ಮನೆ ಸಭಾಧ್ಯಕ್ಷ ಡಿ.ಆರ್. ಪಾಟೀಲ, ಧರ್ಮದರ್ಶಿಗಳಾದ ಉದಯಕುಮಾರ ನಾಯ್ಕ, ಗೀತಾ ಕಲಬುರ್ಗಿ, ವಸಂತ ಸಾಲಗಟ್ಟಿ, ಬಾಳು ಮಗಜಿಕೊಂಡಿ, ಮ್ಯಾನೇಜರ್ ಈರಣ್ಣ ತುಪ್ಪದ ಇತರರು ಇದ್ದರು.
ಧರ್ಮದರ್ಶಿ ಶಾಮಾನಂದ ಪೂಜೇರಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಧರ್ಮದರ್ಶಿ ಎಸ್.ಐ. ಕೋಳಕೂರ ಕಾರ್ಯಕ್ರಮ ನಿರೂಪಿಸಿದರು.