ಮಕ್ಕಳ ಅಕ್ಷರಾಭ್ಯಾಸಕ್ಕೆ ಗುರುಪೂರ್ಣಿಮೆ ಸೂಕ್ತ ಮುಹೂರ್ತ

NRGL AKSHARABHYASA
Published on

ನರೇಗಲ್ಲ: ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಗುರುಪೂರ್ಣಿಮೆಗಿಂತ ಒಳ್ಳೆಯ ಮುಹೂರ್ತ ಸಿಗಲಿಕ್ಕಿಲ್ಲ. ಇಂದು ನಮ್ಮಿಂದ ಅಕ್ಷರಾಭ್ಯಾಸದ ದೀಕ್ಷೆ ಪಡೆದ ಮಕ್ಕಳೆಲ್ಲರೂ ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದು ಸಮಾಜಕ್ಕೆ ಉಪಯುಕ್ತವಾಗುವ ವ್ಯಕ್ತಿಗಳಾಗಲಿ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಾರ ಶ್ರೀಮಠಕ್ಕೆ ಆಗಮಿಸಿದ ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿ ಆಶೀರ್ವಚನ ನೀಡಿದರು. ವೇದವ್ಯಾಸರು ಜನಿಸಿದ ದಿನವೇ ಗುರು ಪೂರ್ಣಿಮೆ. ಅತ್ಯಂತ ಜ್ಞಾನವಂತರಾಗಿದ್ದ ವೇದವ್ಯಾಸರು ಜನಿಸಿದ ಈ ಪೂರ್ಣಿಮೆಯನ್ನು ಗುರು ಪೂರ್ಣಿಮೆ ಎಂದು ಆಚರಿಸಿ, ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಇದರೊಂದಿಗೆ ಈ ದಿನವನ್ನು ಜನರು ತಮಗೆ ಅಕ್ಷರಾಭ್ಯಾಸ ನೀಡಿದ ಗುರುಗಳನ್ನು ನೆನಯುವ ದಿನವನ್ನಾಗಿಯೂ ಆಚರಿಸುತ್ತಾರೆ. ಇಂದೇ ಅಕ್ಷರಾಭ್ಯಾಸಕ್ಕೆ ಬರಬೇಕೆಂದೇನೂ ಇಲ್ಲ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ಯಾವುದೇ ಒಳ್ಳೆಯ ಕೆಲಸಕ್ಕೂ ಪ್ರಾರಂಭದ ದಿನ ಮತ್ತು ಕ್ಷಣವೇ ಒಳ್ಳೆಯ ಮುಹೂರ್ತವಾಗಿರುತ್ತದೆ. ಆದ್ದರಿಂದ ತಾಯಂದಿರು ನಾವು ಶ್ರೀಮಠದಲ್ಲಿದ್ದಾಗ ನಿಮ್ಮ ಮಕ್ಕಳನ್ನು ಯಾವಾಗ ಬೇಕಾದರೂ ಕರೆದುಕೊಂಡು ಬಂದು ಅಕ್ಷರಾಭ್ಯಾಸ ಮಾಡಿಸಿಕೊಂಡು ಹೋಗಬಹುದು ಎಂದರು.

ಡಾ. ಆರ್.ಕೆ. ಗಚ್ಚಿನಮಠ, ಎಸ್.ಕೆ. ಪಾಟೀಲ, ಈಶ್ವರ ಬೆಟಗೇರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net