

ಗುರುಪುರ: ಮಠಗಳು ಸಮಾಜದ ಏಳಿಗೆ ದೆಸೆಯಲ್ಲಿ ಜವಾಬ್ದಾರಿಯುತ ಕೆಲಸ ಮಾಡುತ್ತಿವೆ. ಇಲ್ಲಿನ ದೇವರು-ಧಾರ್ಮಿಕ ವಿಚಾರದಿಂದಲೇ ಜಗತ್ತು ಭಾರತದತ್ತ ನೋಡುವಂತಾಗಿದೆ. ಹಿಂದೆ ಧಾರ್ಮಿಕ ಕೇಂದ್ರಗಳು ನ್ಯಾಯಸ್ಥಾನ, ಕಲಾಕೇಂದ್ರಗಳಾಗಿತ್ತು. ಶ್ರೀ ಕ್ಷೇತ್ರಗಳಲ್ಲಿ ಅಂಥ ಅವತರಣಿಕೆಯ ಪುನರುತ್ಥಾನವಾಗಬೇಕು. ಭಗವಂತನ ಮೇಲೆ ನಂಬಿಕೆ ಇಟ್ಟು ಮಾಡುವ ಪ್ರತಿ ಕೆಲಸಕ್ಕೆ ಆತನ ಕೃಪೆ ಇದ್ದೇ ಇರುತ್ತದೆ ಎಂದು ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಗುರುಪುರ ಜೀರ್ಣೋದ್ಧಾರ ಪ್ರಯುಕ್ತ ಶುಕ್ರವಾರ ವಿಶೇಷ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ನೂರಾರು ವರ್ಷಗಳ ಬಳಿಕ ಶಿಲಾನ್ಯಾಸಗೊಂಡು ಈ ಮಠ ಜೀರ್ಣೋದ್ಧಾರಗೊಳ್ಳುತ್ತಿದೆ. ಹಾಗಾಗಿ ಇದು ಗುರುಪುರದ ಇತಿಹಾಸದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ. ನಮ್ಮ ಅಳಿವು-ಉಳಿವು ಭಗವಂತನ ಇಚ್ಛೆಯಂತಿದೆ. ಆತನ ಇಚ್ಛೆಯಂತೆ ಈ ಪುಣ್ಯದ ಕೆಲಸ ನಡೆಯುತ್ತಿದೆ. ಒಂದು ಒಳ್ಳೆಯ ಕೆಲಸದಲ್ಲಿ ನಾವೆಲ್ಲರೂ ಒಗ್ಗೂಡಿ, ಪರಸ್ಪರ ಸಹಕಾರ ಭಾವನೆಯಿಂದ ಕೆಲಸ ಮಾಡಬೇಕು ಎಂದರು.
ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಮಾಜಿ ಸಚಿವ ಬಿ.ರಮಾನಾಥ ರೈ, ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ನಿಕಟಪೂರ್ವ ಸಂಸದರು, ದ.ಕ. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಮಲ್ಲಿಕಾರ್ಜುನ ಬೆಂಗಳೂರು ಶುಭಹಾರೈಸಿದರು.
ಶ್ರೀ ಜಂಗಮ ಸಂಸ್ಥಾನ ಮಠದ ಮಠಾಧ್ಯಕ್ಷ ಶ್ರೀ ರುದ್ರಮುನಿ ಮಹಾಸ್ವಾಮೀಜಿ ಪ್ರಸ್ತಾವನೆಗೈದು, ಮಠದ ಇತಿಹಾಸದ ಬಗ್ಗೆ ಮಾಹಿತಿ ನೀಡಿದರು. ಹಾಸನ ತಣ್ಣೀರುಹಳ್ಳ ಮಠದ ಶ್ರೀಗಳು, ಬೇವೂರು ಮಠ, ಚೆನ್ನಪಟ್ಟಣ ಮಠ, ಅರಮೇರಿ ಮಠ, ಸಿರಿಗಲ್ಲೆ ಮಠ, ಹುಲಿಯೂರು ದುರ್ಗ ಮಠ, ಹೆಬ್ಬಣಿ ಮಠ, ಶಿಗಮಳ್ಳಿ ಮಠ ಹಾಗೂ ನಂಜನಗೂಡು ಮಠದ ಶ್ರೀಗಳು, ಕಾರಮೊಗರು ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಳ ಆಡಳಿತ ಮೊಕ್ತೇಸರ ಡಾ.ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಬೆಂಗಳೂರು ಬಿಬಿಎಂಪಿ ಮಾಜಿ ಉಪಮೇಯರ್ ಸಿ.ಎಸ್.ಪುಟ್ಟರಾಜು, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ರಾಷ್ಟ್ರೀಯ ಉಪಾಧ್ಯಕ್ಷೆ ವಿನುತಾ ರವಿ, ಬೆಂಗಳೂರು ಉದ್ಯಮಿ ಮಧುಸೂದನ ಪೈ ಗುರುಪುರ, ಅಕ್ಕಮಹಾದೇವಿ ಮಹಿಳಾ ಸಂಘದ ಸುಮಾ ಮಾನ್ವಿ, ಅಖಿಲ ಭಾರತ ವೀರಶೈವ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ, ಕರಾವಳಿ ಕ್ಷೇಮಾಭಿವೃದ್ಧಿ ಸಂಘದ ಚೆನ್ನಬಸಪ್ಪ ಇದ್ದರು.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನೈಾಕ್, ಮುಂಬೈ ಉದ್ಯಮಿ ಹಾಗೂ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಜಯಕೃಷ್ಣ ಎ.ಶೆಟ್ಟಿ, ಗುರುಪುರ ಸತ್ಯದೇವತಾ ಧರ್ಮದೇವತಾ ಮಂದಿರದ ಚಂದ್ರಕಾಂತ ಭಟ್, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮೂಡುಬಿದಿರೆ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳ ಆಡಳಿತ ಮೊಕ್ತೇಸರ ಕುಲದೀಪ ಚೌಟ ಇದ್ದರು.
ಜೀರ್ಣೋದ್ಧಾರದ ವಿವಿಧ ಕೆಲಸಗಳ ಉಸ್ತುವಾರಿ ವಹಿಸಿಕೊಂಡವರನ್ನು ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ನಿತೇಶ್ ಶೆಟ್ಟಿ ಮತ್ತು ವಿಜೆ ಮಧು ಗುರುಪುರ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಅಡಪ ವಂದಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಇತಿಹಾಸ ಕೆದಕಿದಾಗ ಕರಾವಳಿ ಕರ್ನಾಟಕದಲ್ಲಿ ನೂರಾರು ಮಠಗಳಿದ್ದ ನಿದರ್ಶನಗಳಿವೆ. ಆದರೆ ಈಗ ಗುರುಪುರ ಜಂಗಮ ಸಂಸ್ಥಾನ ಮಠದ ಸಹಿತ ಬೆರಳೆಣಿಕೆ ಮಠಗಳು ಮಾತ್ರ ಕಾಣ ಸಿಗುತ್ತವೆ. ಈ ಮಠಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಗುರುಗಳಿದ್ದ ‘ಪುರ’ ಗುರುಪುರವಾಗಿದೆ. ಅತಿ ಶೀಘ್ರ ಶಿಲಾಮಯ ಜೀರ್ಣೋದ್ಧಾರದೊಂದಿಗೆ ಮಠದ ಗತವೈಭವ ಮರುಕಳಿಸಿ. ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ತುಮಕೂರಿನ ಶ್ರೀ ಸಿದ್ಧಗಂಗಾ ಮಠ ಶ್ರೀ ಕ್ಷೇತ್ರದ ಶಿಲಾಮಯ ನಿರ್ಮಾಣ ಕಾರ್ಯ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಡೆಯಲಿದೆ. ಇಂಥ ಪುಣ್ಯದ ಕೆಲಸದಲ್ಲಿ ಎಲ್ಲರ ಸಹಕಾರ ಅವಶ್ಯ. ಹಿಂದುಗಳು ಯಾವುದೇ ರಾಜಕೀಯ ಪಕ್ಷದಲ್ಲಿದ್ದರೂ, ಇಂಥ ಪುಣ್ಯದ ಕೆಲಸದಲ್ಲಿ ಎಲ್ಲ ಹಿಂದುಗಳು ಕೈಜೋಡಿಸಬೇಕು. ವೈಯಕ್ತಿಕ ನೆಲೆಯಲ್ಲಿ ಮತ್ತು ಸರ್ಕಾರದಿಂದ ಸಿಗುವ ನೆರವಿಗೆ ಪ್ರಯತ್ನಿಸುವೆ. ಡಾ.ಭರತ್ ಶೆಟ್ಟಿ, ಶಾಸಕ https://www.vijayavani.net/tribute-to-achievers-in-subramanya https://www.vijayavani.net/kannada-rajyotsava-preparation-meeting