ರಥ ಕಟ್ಟುವ ಕಾಯಕಕ್ಕೆ ತಂಡ ಸಿದ್ಧ

Chariot
Published on

ಧನಂಜಯ ಗುರುಪುರ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ವಾರ್ಷಿಕ ರಥೋತ್ಸವ, ಗುರ್ಜಿ ಉತ್ಸವ ಆರಂಭಗೊಂಡಿದ್ದು, ರಥ ಕಟ್ಟುವ ಕಾಯಕಕ್ಕೆ ಚಾಲನೆ ದೊರೆತಿದೆ. ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತ ಬಂದಿರುವ ವಾರ್ಷಿಕ ರಥೋತ್ಸವ, ಸಣ್ಣ ರಥೋತ್ಸವ(4 ಬಾರಿ) ಮತ್ತು ಗುರ್ಜಿ(ದಿಂಡ್) ಉತ್ಸವಗಳಿಗೆ ರಥ ಹಾಗೂ ಗುರ್ಜಿ ಸಿದ್ಧಪಡಿಸುವ ದೇವಾಡಿಗರು, ಜೋಗಿಗಳು ಮತ್ತು ಸಫಲಿಗರನ್ನು ಒಳಗೊಂಡ ಇಲ್ಲಿನ ತಂಡ ಜಿಲ್ಲೆಯ ಇತರ ದೇವಸ್ಥಾನಗಳಲ್ಲೂ ರಥ ಕಟ್ಟುವ ಕಾರ್ಯ ಮಾಡುತ್ತಿದೆ.

ಸಂಜೀವ ದೇವಾಡಿಗ, ಶಿವಪ್ಪ ದೇವಾಡಿಗ, ಚಂದು ದೇವಾಡಿಗ, ಸಂದೀಪ್ ಜೋಗಿ ಇವರನ್ನೊಳಗೊಂಡ ಗುರುಪುರದ ಒಂಬತ್ತು ಮಂದಿಯ ತಂಡ ವಾಮಂಜೂರು, ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನ ಮತ್ತು ಹಳೆಯಂಗಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ರಥ ಕಟ್ಟಿದರೆ, ಮಂಗಳೂರಿನ ಬಜಿಲಕೇರಿ, ಗುರುಪುರ ಮತ್ತು ಮಣ್ಣಗುಡ್ಡೆಯಲ್ಲಿ ಗುರ್ಜಿ ಸಿದ್ಧಪಡಿಸುತ್ತದೆ.

ರಥ, ಗುರ್ಜಿ ಕಟ್ಟುವ ವಿಧಾನ: ರಥ ಅಥವಾ ಗುರ್ಜಿ ಪ್ರದೇಶವಾರು ಭಿನ್ನವಾಗಿರುತ್ತವೆ. ರಥಗಳು ಸುಮಾರು 20 -25 ಅಡಿ ಇದ್ದರೆ, ಗುರ್ಜಿ ಸಾಮಾನ್ಯವಾಗಿ 10 -15 ಅಡಿ ಎತ್ತರವಿರುತ್ತವೆ. ಗುರ್ಜಿಗೆ ನೆಲದಲ್ಲೇ ನಾಲ್ಕು ಕಂಬ(ಗನೆ) ಅಳವಡಿಸಲಾಗಿ, ಮೇಲಕ್ಕೆ ಬಿಳಿ ಮತ್ತು ಕೆಂಪು ಪತಾಕೆಗಳಿಂದ ರಥದ ಶೈಲಿಯಲ್ಲಿ ಸಿಂಗರಿಸಲಾಗುತ್ತದೆ. ರಥ ಅಥವಾ ಗುರ್ಜಿಯ ಮಧ್ಯಭಾಗ ಕಂಗಿನ ಸಲಾಕೆ ಮತ್ತು ನಾಗರಬೆತ್ತದ ಸಹಾಯದಿಂದ ಉರುಟಾದ ಗೂಡು ನಿರ್ಮಿಸಲಾಗುತ್ತದೆ. ಗೂಡು ಆಧರಿಸಲು ಸಲಾಕೆ ಕಟ್ಟಲಾಗುತ್ತದೆ. ಬಿದಿರಿನ ಓಟೆಗಳಿಗೆ ಪತಾಕೆ ಕಟ್ಟಲಾಗುತ್ತದೆ. ಇದರ ಮೇಲ್ಗಡೆ ಕೆಂಪು ಬಟ್ಟೆ ಹಾಸಲಾದ ಮತ್ತೊಂದು ಚಿಕ್ಕ ಗೂಡು ಹಾಗೂ ಅದರ ಮೇಲ್ಗಡೆ ಕಳಸವಿರುತ್ತದೆ.

ಗುರುಪುರ ಮತ್ತು ಇತರೆಡೆ ಹಲವು ವರ್ಷದಿಂದ ರಥ ಹಾಗೂ ಗುರ್ಜಿ ಸಿದ್ಧಪಡಿಸುತ್ತಿದ್ದೇವೆ. ಎಲ್ಲ ಸೊತ್ತುಗಳಿರುವ ಹೊರತಾಗಿಯೂ ಗುರ್ಜಿ ಸಿದ್ಧಪಡಿಸಲು 10 ಸಾವಿರ ರೂ. ಮತ್ತು ರಥ ಸಿದ್ಧಪಡಿಸಲು 20-25 ಸಾವಿರ ರೂ. ಪಡೆಯುತ್ತೇವೆ. ಈಗ ನಮ್ಮಲ್ಲೇ ಈ ಕೆಲಸ ಮಾಡುವವರ ಕೊರತೆ ಕಂಡು ಬಂದಿದ್ದು, ಬೇರೆಯವರನ್ನು ಬಳಸಿಕೊಳ್ಳುತ್ತಿದ್ದೇವೆ. ಕೆಲವು ವರ್ಷಗಳಿಂದ ಕಬ್ಬಿಣ ಗೂಡು ಹಾಗೂ ಇತರ ಸಲಕರಣೆ ಬಂದಿದ್ದು, ಕೆಲಸ ಸುಲಭವಾಗಿದೆ. ಇಷ್ಟಿದ್ದರೂ, ಸಾಂಪ್ರದಾಯಿಕ ರಥ ಕಟ್ಟುವ ಕೆಲಸಕ್ಕೆ ಈವರೆಗೆ ಬರ ಬಂದಿಲ್ಲ. ಸಂಜೀವ ದೇವಾಡಿಗ ರಥ ಕಟ್ಟುವವರು ಇಲೆಕ್ಟ್ರಿಶಿಯನ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿರುವ ನಾನು ಎಂಟು ವರ್ಷದಿಂದ ಇಲ್ಲಿನ ತಂಡದೊಂದಿಗಿದ್ದು, ಸಾಂಪ್ರದಾಯಿಕ ರಥ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಇದು ದೇವರ ಕೆಲಸ. ಇದರಲ್ಲಿ ಖುಷಿ ಇದೆ. ಸಂದೀಪ್ ಜೋಗಿ ತಂಡದ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net